ಕೊಡಗು :ರಾಜ್ಯಕ್ಕೆ ನೀರುಣಿಸುವ ನದಿ ಕಾವೇರಿಯ ಹೂಟ್ಟೂರಿನಲ್ಲಿ ಇದೀಗ ನೀರಿಗಾಗಿ ಭಾರಿ ಸಂಕಷ್ಟ ಶುರುವಾಗಿದೆ. ಕೊಡಗಿನಲ್ಲಿ ಹುಟ್ಟುವ ಜೀವನದಿ ಕಾವೇರಿ ರೈತರ ಜೀವನಾಡಿ, ಜನರ ಧಣಿವಾರಿಸುವ ಗಂಗಾ ಮಾತೆಯೂ ಹೌದು. ಇಂತಹ ಪವಿತ್ರ ನದಿಯ ನಾಡಿನ ಜನರಿಗೆ ನೀರಿನ ಬವಣೆ ಎದುರಾಗಿದೆ. ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿ ಏಪ್ರಿಲ್, ಮೇ ತಿಂಗಳಿನಲ್ಲಿ ಜಲಮೂಲಗಳು ಬತ್ತಿ ಸಮಸ್ಯೆ ಎದುರಾದರೆ, ಇದೀಗ ಮಳೆಗಾಲದಲ್ಲೂ ಮತ್ತೊಂದು ಸಮಸ್ಯೆ ಜನರಿಗೆ ತಲೆನೋವು ತಂದಿದೆ.
ನೀರಿನ ಕೊರತೆ ಕುರಿತು ಮಾತನಾಡಿದ ಶಾಸಕ ಡಾ.ಮಂತರ್ ಗೌಡ, "ಮಡಿಕೇರಿ ನಗರದಲ್ಲಿ ಕಳೆದ 5 ದಿನಗಳಿಂದ ನೀರಿನ ಸಮಸ್ಯೆ ಎದುರಾಗಿದೆ. ಜನತೆ ಪ್ರತಿನಿತ್ಯ ತೊಂದರೆ ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಮಡಿಕೇರಿ ಸಮೀಪದ ಕೂಟೂ ಹೊಳೆಯಿಂದ ಮಡಿಕೇರಿ ನಗರಕ್ಕೆ ನೀರು ಪೂರೈಕೆಯಲ್ಲಿ ಸಮಸ್ಯೆ ಆಗಿರುವುದು. ಆದರೆ ಕೂಟೂ ಹೊಳೆಯಿಂದ ನೀರು ಪಂಪ್ ಮಾಡುವ 300 ಹೆಚ್ಪಿ ಸಾಮರ್ಥ್ಯದ ಎರಡು ಮೋಟಾರ್‌ಗಳು ಇದೀಗ ದುರಸ್ತಿಗೆ ಒಳಗಾಗಿವೆ. ಇದರಿಂದ ಮಡಿಕೇರಿ ನಗರಕ್ಕೆ ನೀರು ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಕೊರತೆ ಸರಿದೂಗಿಸಲು ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದೆ. ಓವರ್ ಲೋಡ್ ವಾಹನಗಳು ಗುಡ್ಡಗಾಡು ಪ್ರದೇಶವನ್ನು ಹತ್ತಲು ಸಾಧ್ಯವಾಗದೇ ಇರುವುದರಿಂದ ಕೆಲವೊಂದು ಗುಡ್ಡಗಾಡು ಪ್ರದೇಶಗಳಿಗೂ ಸೂಕ್ತ ರೀತಿಯಲ್ಲಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಇಲ್ಲಿಯವರೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಮೋಟಾರು ಸರಿಯಾಗಿ ನಿರ್ವಹಣೆ ಮಾಡಿಲ್ಲ" ಎಂದು ಹೇಳಿದರು.