ಕೊಡಗು: ವೃದ್ಧ ದಂಪತಿಯನ್ನು ಕೋಣೆಯಲ್ಲಿ ಕೂಡಿಹಾಕಿ ದರೋಡೆ ಮಾಡಿರುವ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಮಾಲ್ದಾರೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ತಂಗಪ್ಪಣ್ಣ ಹಾಗೂ ಜಾನಕಿ ದಂಪತಿಯ ಮನೆಗೆ ನಿನ್ನೆ ರಾತ್ರಿ ಅಂದಾಜು 9 ಗಂಟೆ ಹೊತ್ತಿಗೆ ಮೂರು ಮಂದಿ ಮುಸುಕುಧಾರಿಗಳು ದಾಳಿ ಮಾಡಿದ್ದಾರೆ.
ಮನೆಯ ಹಿಂಬದಿಯ ಬಾಗಿಲು ಮೂಲಕ ಒಳಗೆ ಪ್ರವೇಶಿಸಿದ ದರೋಡೆಕೋರರು ಚಿನ್ನ ಹಾಗೂ ನಗದನ್ನು ಎಲ್ಲಿಟ್ಟಿದ್ದೀರಿ ಎಂದು ಬೆದರಿಸಿ ದಂಪತಿಯನ್ನು ಮನೆಯ ಕೋಣೆಯೊಂದರಲ್ಲಿ ಕೂಡಿಹಾಕಿದ್ದಾರೆ. ಬಳಿಕ ದರೋಡೆಕೋರರು ಮನೆಯಲ್ಲಿದ್ದ ಅಂದಾಜು 1.5 ಲಕ್ಷ ರೂ. ಹಣವನ್ನು ದೋಚಿದ್ದಾರೆ. ಕೊನೆಯಲ್ಲಿ ಜಾನಕಿ ಅವರ ಕುತ್ತಿಗೆಯಲ್ಲಿದ್ದ ಸರವನ್ನು ಕಸಿಯಲು ಎಳೆದಾಡಿದ್ದಾರೆ. ಪರಿಣಾಮ ಅರ್ಧ ಭಾಗ ಸರ ದರೋಡೆಕೋರರ ಕೈ ಸೇರಿದೆ.