ಮಡಿಕೇರಿ/ಕೊಡಗು:ಕೊರೊನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಟೂರಿಸಂ ಇದೀಗ ಓಪನ್ ಆಗಿದೆ. ಕೊಡಗಿನ ಎಲ್ಲ ಪ್ರವಾಸಿತಾಣಗಳು ತೆರೆದಿದ್ರೂ ದುಬಾರೆಯಲ್ಲಿ ರಿವರ್ ರ‍್ಯಾಫ್ಟಿಂಗ್ ಬಂದ್ ಮಾಡಿ ಜಿಲ್ಲಾಡಳಿತ ಆದೇಶಿಸಿದೆ. ಹೀಗಾಗಿ, ಇದನ್ನೇ ಆದಾಯದ ಭಾಗವಾಗಿ ಮಾಡಿಕೊಂಡಿದ್ದ ಜನರು ಸಂಕಷ್ಟಕ್ಕೊಳಗಾಗಿದ್ದಾರೆ.
ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ದುಬಾರೆಯಲ್ಲಿ, ಕಲ್ಲು ಬಂಡೆಗಳ ಮಧ್ಯೆ ರಭಸದಿಂದ ಹರಿಯೋ ನದಿಯಲ್ಲಿ ಜಲಕ್ರೀಡೆಯಾಡೋದು ಪ್ರವಾಸಿಗರಿಗೆ ಬಲು ಇಷ್ಟ. ದುಬಾರೆ ಕಾವೇರಿ ನದಿಯಲ್ಲಿ ಪ್ರತಿನಿತ್ಯ ನೂರಾರು ಮಂದಿ ರ‍್ಯಾಫ್ಟಿಂಗ್ ಎಂಜಾಯ್ ಮಾಡ್ತಾರೆ. ಆದ್ರೆ, ಕೊರೊನಾ ಕಾರಣಕ್ಕೆ ದುಬಾರೆ ರಿವರ್ ರ‍್ಯಾಫ್ಟಿಂಗ್ ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಜುಲೈನಲ್ಲಿ ಲಾಕ್ಡೌನ್ ಓಪನ್ ಆದ್ಮೇಲೆ ದುಬಾರೆಯಲ್ಲಿ ರಿವರ್ ರ‍್ಯಾಫ್ಟಿಂಗ್ ಆರಂಭವಾಗಿತ್ತು. ಹಾಗಾಗಿ ಸಾಲ ಮಾಡಿ ರ‍್ಯಾಫ್ಟಿಂಗ್ ಬೋಟ್ ಖರೀದಿಸಿದ್ದ ಮಾಲೀಕರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರು. ಆದ್ರೆ ರ‍್ಯಾಫ್ಟಿಂಗ್ ಆರಂಭವಾಗಿ ಕೆಲವೇ ದಿನಗಳಲ್ಲಿ ಮತ್ತೆ ಸ್ಥಗಿತಗೊಳಿಸಲಾಗಿದೆ. ಆದರೆ ಇದರ ಅರಿವಿಲ್ಲದ ನೂರಾರು ಪ್ರವಾಸಿಗರು ರ‍್ಯಾಫ್ಟಿಂಗ್ ಮಾಡಲು ದುಬಾರೆಯತ್ತ ಆಗಮಿಸ್ತಾ ಇದ್ದಾರೆ. ರ‍್ಯಾಫ್ಟಿಂಗ್ ಇಲ್ಲ ಎಂದು ತಿಳಿದು ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ.