ಕೊಡಗು: ಬಿಜೆಪಿ ಸರ್ಕಾರದ ಬೊಕ್ಕಸದಲ್ಲಿ ಹಣವಿದೆ, ಬೊಮ್ಮಾಯಿ ಸರ್ಕಾರದಲ್ಲಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ನಮ್ಮ ಸರ್ಕಾರ ಬಂದ ಮೇಲೆ ತೆರಿಗೆ ಪೋಲಾಗುತ್ತಿದ್ದುದನ್ನು ತಡೆದಿದ್ದೇವೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಹಣದ ಕೊರತೆ ಇತ್ತು, ಈಗ ಹಣದ ಕೊರತೆ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಜಿಲ್ಲೆಯಲ್ಲಿ ಮಳೆ ಹಾನಿ ಪ್ರದೇಶಗಳು ಹಾಗೂ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಮಾತನಾಡಿದರು.
ನ್ಯಾಯಾಧೀಶರಿಗೆ ಬೆದರಿಕೆ, ಒತ್ತಡ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದ್ರೆ, ಯಾರೇ ಬೆದರಿಕೆ ಹಾಕಿದರೂ ಬಿಜೆಪಿ ಸರ್ಕಾರ ಅವರನ್ನು ಬಿಡಲ್ಲ, ಮಟ್ಟ ಹಾಕ್ತೀವಿ. ಯಾವ ನ್ಯಾಯಾಧೀಶರಿಗೆ ಬೆದರಿಕೆ ಇದೆಯೋ ಅವರು ಮುಖ್ಯ ನ್ಯಾಯಮೂರ್ತಿಗೆ ದೂರು ಕೊಡಬಹುದು. ನಮ್ಮ ಸರ್ಕಾರ ಇರುವುದಕ್ಕಾಗಿ ಐಎಎಸ್, ಐಪಿಎಸ್ ಅಧಿಕಾರಿಗಳ ಬಂಧನವಾಗಿದೆ. ಸಿದ್ದರಾಮಯ್ಯ ಸರ್ಕಾರ ಇದ್ದಿದ್ದರೆ ಎಲ್ಲವನ್ನೂ ಮುಚ್ಚಿ ಹಾಕುತ್ತಿದ್ದರು. ಬೊಮ್ಮಾಯಿ ಸರ್ಕಾರ ಮಾತ್ರ ಭ್ರಷ್ಟಾಚಾರವನ್ನು ಮಟ್ಟಹಾಕುತ್ತಿದೆ ಎಂದು ತಿಳಿಸಿದರು.
ಕೊಡಗು ಮಳೆ ಹಾನಿ ಪ್ರದೇಶಕ್ಕೆ ಆರ್.ಅಶೋಕ್ , ಅಪ್ಪಚ್ಚು ರಂಜನ್ ಭೇಟಿ ಅಪ್ಪಚ್ಚು ರಂಜನ್ ಭೇಟಿ:ಕೊಡಗು ಜಿಲ್ಲೆಯಲ್ಲಿ ಮಳೆಯ ಆಬ್ಬರ ಮುಂದುವರೆದಿದೆ. ಜಿಲ್ಲೆಯ ಹಲವೆಡೆ ಗುಡ್ಡ ಕುಸಿದು ಅವಾಂತರ ಸೃಷ್ಟಿಯಾಗಿದೆ. ನಿನ್ನೆ ಮುಂಜಾನೆ ಮದೆನಾಡು ಸಮೀಪದ ಕರ್ತೋಜಿ ಬಳಿ ಗುಡ್ಡ ಕುಸಿದಿದ್ದು ಕೆಲಕಾಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಇನ್ನೊಂದೆಡೆ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಚಾಮುಂಡೇಶ್ವರಿ ನಗರಕ್ಕೆ ಭೇಟಿ ನೀಡಿದ ಶಾಸಕರು, ಅಪಾಯಕಾರಿ ಮನೆಗಳನ್ನು ಸ್ಥಳಾಂತರಿಸುವಂತೆ ಹಾಗೂ ಯಾವುದೇ ಹೊಸ ಮನೆಗಳ ನಿರ್ಮಾಣಕ್ಕೆ ಅನುಮತಿ ನೀಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಪಾಯಕಾರಿ ಮನೆಗಳಲ್ಲಿ ವಾಸವಿರುವ ಎಲ್ಲ ಜನರನ್ನು ಬೇರೆಗೆ ಸ್ಥಳಾಂತರಿಸುವಂತೆ ತಿಳಿಸಿದರು.
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಕೆಳಭಾಗದ ರಿಟೈನಿಂಗ್ ವಾಲ್ ಮಳೆಯ ಹೊಡೆತಕ್ಕೆ ಸ್ವಲ್ಪ ಪ್ರಮಾಣದಲ್ಲಿ ಉಬ್ಬಿದೆ. ಜಿಲ್ಲೆಯಲ್ಲಿ ಮಳೆ ಮುಂದುವರೆದಿದೆ. ಇಂದು ಮುಂಜಾನೆ 8.30ರ ವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಂಗನವಾಡಿ ಸೇರಿದಂತೆ ಶಾಲಾ, ಕಾಲೇಜುಗಳಿಗೆ ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ರಜೆ ಘೋಷಿಸಿದ್ದಾರೆ.