ಮಡಿಕೇರಿ(ಕೊಡಗು): ಪ್ರಾಕೃತಿಕ ಸೌಂದರ್ಯದಿಂದ ಕೂಡಿರುವ ಪುಟ್ಟ ಜಿಲ್ಲೆ ಕೊಡಗು. ಆದರೆ, ಕಳೆದ ಎರಡು ವರ್ಷಗಳಿಂದ ಮಳೆ ಇನ್ನಿಲ್ಲದ ಅವಾಂತರವನ್ನೇ ಸೃಷ್ಟಿಸಿದೆ. ಸಾಕಷ್ಟು ಆಸ್ತಿ ಹಾಗೂ ಪ್ರಾಣ ಹಾನಿಯನ್ನು ಉಂಟು ಮಾಡಿದೆ. ಹೀಗೆ 2018-19 ರವರೆಗೆ ಜಿಲ್ಲೆಯನ್ನು ಪ್ರವಾಹದ ಭೀತಿಯಲ್ಲೇ ಮುಳುಗಿಸಿರುವ ಕೊಡಗು ಚೇತರಿಸಿಕೊಳ್ಳುತ್ತಿದ್ದಂತೆ ಮಳೆಗಾಲದಲ್ಲಿ ಅತಿವೃಷ್ಟಿ ಸೃಷ್ಟಿಯಾಗುತ್ತದೆ.
ಮಹಾ ಮಳೆಗೆ ಮನೆಗಳು, ಸಂಪರ್ಕ ರಸ್ತೆಗಳು,ಹಾಗೆಯೇ ಗ್ರಾಮದ ಎಲ್ಲೆಯನ್ನೇ ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರವೂ ಸಾಕಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ. ಸಂತ್ರಸ್ತರಿಗೆ ಸುರಕ್ಷಿತವಾದ ಸರ್ಕಾರಿ ಜಾಗದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸುತ್ತಿದೆ. ಇನ್ಫೋಸಿಸ್, ರೋಟರಿ ಮತ್ತು ರಿ ಬಿಲ್ಡ್ ಕೊಡಗು ಹೀಗೆ ಹಲವು ಖಾಸಗಿ ಸಂಸ್ಥೆಗಳು ಮಾನವೀಯ ನೆಲೆಗಟ್ಟಿನ ಮೇಲೆ ನೆರವು ನೀಡುತ್ತಿವೆ. ಆದರೆ, ಇವೆಲ್ಲವುದಕ್ಕೂ ಮೀರಿ ಹುಟ್ಟೂರು ಎನ್ನುವ ಅಭಿಮಾನದಿಂದ ಗ್ರಾಮಸ್ಥರೇ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡು ಪ್ರವಾಹದಿಂದ ಅಸ್ತವ್ಯಸ್ತವಾಗಿರುವ ಗ್ರಾಮದ ರಸ್ತೆಗಳು, ಹಳೆ ಕಾಲದ ಸೇತುವೆಗಳ ಪುನರ್ ನವೀಕರಣಕ್ಕೆ ಕೈ ಜೋಡಿಸಿರುವ ಅಪರೂಪದ ಘಟನೆ ಮಡಿಕೇರಿ ತಾಲೂಕಿನ 2 ನೇ ಮೊಣ್ಣಂಗೇರಿ ಗ್ರಾಮದಲ್ಲಿ ಕಂಡು ಬಂದಿದೆ.
2018 ಹಾಗೂ 19 ರಲ್ಲಿ ಸುರಿದ ಧಾರಾಕಾರ ಮಳೆಗೆ 2 ನೇ ಮೊಣ್ಣಂಗೇರಿಯೂ ನಲುಗಿತ್ತು. ಈ ಹಿನ್ನೆಲೆಯಲ್ಲಿ ಊರಿನ ಅಭಿವೃದ್ಧಿಯ ದೃಷ್ಟಿಯಿಂದ ಸಮಾನ ಮನಸ್ಕರು ಸೇರಿ 'ನಮ್ಮ ಗ್ರಾಮ 2022' ಎಂದು ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡು ಪ್ರವಾಹದಿಂದ ಹಾನಿಗೆ ಒಳಗಾಗಿರುವ ಸ್ಥಳಗಳನ್ನು ಪುನರ್ ನಿರ್ಮಿಸುತ್ತಿದ್ದಾರೆ.