ಮಡಿಕೇರಿ(ಕೊಡಗು): ರಾಜಾಸೀಟು ಉದ್ಯಾನವನಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದ್ದು, ಪಾಥ್ ವೇ ಹಾಗೂ ವೀಕ್ಷಣಾ ಗೋಪುರ ಸ್ಥಳ ಸೇರಿದಂತೆ ಹಲವು ಕಾಮಗಾರಿಗಳ ಸ್ಥಳಕ್ಕೆ ಶಾಸಕ ಅಪ್ಪಚ್ಚು ರಂಜನ್ ನಿನ್ನೆ ಭೇಟಿ ನೀಡಿ ವೀಕ್ಷಿಸಿದ್ದಾರೆ.
ಪ್ರವಾಸಿಗರ ಸ್ವರ್ಗ ರಾಜಸೀಟುಗೆ ಹೈಟೆಕ್ ಸ್ಪರ್ಶ; 3.43 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ - ಕೊಡಗು ಜಿಲ್ಲೆ
ಮಂಜಿನ ನಗರಿ ಮಡಿಕೇರಿಯ ಆಕರ್ಷಣೆಯ ಕೇಂದ್ರಬಿಂದು, ಪ್ರವಾಸಿಗರನ್ನು ಆಕರ್ಷಕಣೆಯ ರಾಜಸೀಟು ಉದ್ಯಾನವನಕ್ಕೆ ಹೈಟೆಕ್ ಸ್ಪರ್ಶ ಕೊಡಲಾಗುತ್ತಿದೆ. 3.43 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಮತ್ತಷ್ಟು ಪ್ರವಾಸಿಗರಿಗೆ ಮೆರಗು ನೀಡಲಾಗುತ್ತಿದೆ. ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ನಿನ್ನೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು 3.43 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಜೆಸಿಬಿ ಬಳಸದೆ ಸ್ವಾಭಾವಿಕವಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು, ಬೆಟ್ಟಕ್ಕೆ ತೊಂದರೆಯಾಗದಂತೆ ಕಾಮಗಾರಿ ಮಾಡಲಾಗುತ್ತಿದೆ. ಸರ್ಕಾರದಿಂದ ಇನ್ನೂ 3 ಕೋಟಿ ರೂ. ಬಿಡುಗಡೆ ಮಾಡಿಸಲಾಗುವುದು ಹೇಳಿದರು. ಈಗಾಗಲೇ 3 ಎಕರೆಯಲ್ಲಿ ರಾಜಾಸೀಟು ಇದ್ದು, ಮುಂದುವರೆದು 6 ಎಕರೆ ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ, ಕೋವಿಡ್ ಪೂರ್ವ ಸಂದರ್ಭದಲ್ಲಿ ರಾಜಾಸೀಟಿಗೆ ಶನಿವಾರ ಮತ್ತು ಭಾನುವಾರಗಳಂದು ಮೂರರಿಂದ ನಾಲ್ಕು ಸಾವಿರ ಪ್ರವಾಸಿಗರು ಆಗಮಿಸುತ್ತಿದ್ದರು. ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿ ಸಹಕಾರಿಯಾಗಲಿದೆ ಎಂದರು.
ರಾಜಾಸೀಟಿನಲ್ಲಿ ನಡೆದು ಪ್ರಾಕೃತಿಕ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ. ನಾಪೋಕ್ಲು ಮತ್ತು ವಿರಾಜಪೇಟೆವರೆಗೂ ಪ್ರಾಕೃತಿಕ ಸೌಂದರ್ಯ ಕಾಣಲಿದೆ ಪ್ರವಾಸಿಗರಿಗೆ ಇನ್ನಷ್ಟು ಇಷ್ಟವಾಗುತ್ತದೆ. ಈಗ ಕಾಮಗಾರಿ ನಡೆಯುತ್ತಿದ್ದು, ರಾಜಾಸೀಟಿನಲ್ಲಿ ಯಾವುದೇ ರೀತಿ ಧಕ್ಕೆಯಾಗದಂತೆ ಸ್ವಾಭಾವಿಕವಾಗಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೇಳಿದರು.