ಕರ್ನಾಟಕ

karnataka

ETV Bharat / state

ದಕ್ಷಿಣ ಕಾಶ್ಮೀರಕ್ಕೆ ಕೊಂಚ ಬಿಡುವು ನೀಡಿದ ವರುಣ! ನಿಟ್ಟುಸಿರು ಬಿಟ್ಟ ಜನತೆ - Flood prone area

ರಾಜ್ಯದಲ್ಲಿ ಕಳೆದ ಒಂಬತ್ತು- ಹತ್ತು ದಿನಗಳಿಂದ ಸುರಿತ್ತಿರುವ ವರುಣನ ಅಬ್ಬರ ಸ್ವಲ್ಪ ತಗ್ಗಿದಂತಿದೆ. ಕೊಡಗಿನಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ವರ್ಷಧಾರೆ ಸುರಿದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಜೊತೆಗೆ ರಸ್ತೆಗಳು ಬಿರುಕು ಬಿಟ್ಟಿವೆ. ಮರಗಳು ಧರೆಗೆ ಉರುಳಿದ್ದು, ಮನೆ- ಮಠಗಳು ಜಲಾವೃತವಾಗಿದೆ. ಸದ್ಯ ಪರಿಸ್ಥಿತಿಗಳು ನಿಯಂತ್ರಣಕ್ಕೆ ಬರುತ್ತಿವೆ.

rainfall-down-in-kodagu

By

Published : Aug 13, 2019, 12:23 PM IST

ಕೊಡಗು: ರಾಜ್ಯದಲ್ಲಿ ಕಳೆದ ಒಂಭತ್ತು- ಹತ್ತು ದಿನಗಳಿಂದ ಸುರಿತ್ತಿರುವ ವರುಣನ ಅಬ್ಬರ ಸ್ವಲ್ಪ ತಗ್ಗಿದಂತಿದೆ. ಅದರಲ್ಲಿ ದಕ್ಷಿಣ ಕಾಶ್ಮೀರ, ಪ್ರವಾಸಿಗರ ಸ್ವರ್ಗ ಎಂದೇ ಪ್ರಸಿದ್ಧಿ ಹೊಂದಿರುವ ಕೊಡಗು ಕಳೆದ ವರ್ಷದಂತೆ ಈ ಬಾರಿಯೂ ವರ್ಷಧಾರೆಗೆ ನಲುಗಿದೆ. ಇದೀಗ ಮಳೆ ತಗ್ಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ ಪರಿಣಾಮ ಜಿಲ್ಲಾದ್ಯಂತ ಒಟ್ಟು 79 ಪ್ರದೇಶಗಳು ಪ್ರವಾಹ ಪೀಡಿತವಾಗಿವೆ. ಇದುವರೆಗೂ ಮಳೆ ಹಾನಿಗೆ ಮಡಿಕೇರಿಯಲ್ಲಿ 30, ವಿರಾಜಪೇಟೆಯಲ್ಲಿ 32, ಸೋಮವಾರಪೇಟೆ ತಾಲೂಕಿನಲ್ಲಿ 4, ಕುಶಾಲನಗರ ಪಟ್ಟಣ ಪಂಚಾಯಿತಿ ಭಾಗದಲ್ಲಿ 5, ವಿರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 8 ಪ್ರದೇಶಗಳು ಪ್ರವಾಹಕ್ಕೆ ಒಳಗಾಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

ನೀರು ತುಂಬಿರುವ ಮತ್ತು ಕುಸಿದು ಬಿದ್ದಿರುವ ಮನೆಗಳು

ಜಿಲ್ಲೆಯಲ್ಲಿ ಅಂದಾಜು 147 ಮನೆಗೆಳು ಭಾಗಶ: ಮತ್ತು 90 ಮನೆಗಳು ಪೂರ್ಣವಾಗಿ ಹಾನಿಯಾಗಿದ್ದು, ದಿನ ಬಳಕೆ ಸಾಮಗ್ರಿಗಳನ್ನು ಕಳೆದುಕೊಂಡ ಕುಟುಂಬಕ್ಕೆ 3,800 ರೂ. ಪರಿಹಾರ ಒದಗಿಸಲಾಗಿದೆ‌. ಒಟ್ಟು 45 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. 2,270 ಕುಟುಂಬಗಳಿಗೆ ಹಾಗೂ 7,873 ನಿರಾಶ್ರಿತರಿಗೆ ಆಶ್ರಯ ನೀಡಲಾಗಿದೆ.1,507 ಜನರು ಮತ್ತು 19 ಜಾನುವಾರುಗಳನ್ನ ರಕ್ಷಿಸಿ 8 ಜಾನುವಾರುಗಳನ್ನು ಗೋ ಶಾಲೆಗೆ ಸ್ಥಳಾಂತರಿಸಲಾಗಿದೆ ಎಂದು ವರದಿ ನೀಡಿದೆ.

ಹಲವೆಡೆ ವಿದ್ಯುತ್ ಸಂಪರ್ಕ ಕಡಿತ:ಜಿಲ್ಲೆಯ ವಿವಿಧ ಭಾಗಗಳಲ್ಲಿ ಜಲಾವೃತ, ಬರೆ ಕುಸಿತದಿಂದ ಮರಗಳು ಬಿದ್ದು ಕಗ್ಗತ್ತಲು ಆವರಿಸಿದೆ‌. ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳು ಮುರಿದು ಬಿದ್ದಿರುವುದರಿಂದ ವಿದ್ಯುತ್ ಸಂಪರ್ಕದಲ್ಲಿ ಹೆಚ್ಚಿನ ಪ್ರಮಾಣದ ಅಡಚಣೆ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲವೆಡೆ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ‌. ಈಗಾಗಲೇ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ‌ ಹಾನಿಗೆ ಒಳಗಾಗಿರುವ ಸ್ಥಳಗಳಲ್ಲಿ ಸಂಪರ್ಕ ಕಲ್ಪಿಸುವ ಕೆಲಸಗಳು ಭರದಿಂದ ಸಾಗಿವೆ‌.

ಪ್ರವಾಹ ಪರಿಸ್ಥಿತಿ ಎದುರಿಸಲು ಹಗಲಿರುಳುಯೆನ್ನದೆ ದುಡಿದವರು

ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುತ್ತಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ:

ಜಿಲ್ಲಾಡಳಿತ ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದ್ದು, ಜಿಲ್ಲಾಧಿಕಾರಿ ಅನೀಸ್ ಕಣ್ಮನಿ‌ ಜಾಯ್, ಎಸ್ಪಿ ಡಾ.ಸುಮನ್ ಡಿ ಪನ್ನೇಕರ್ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯಾ ಘಟನಾ ಸ್ಥಳಗಳಿಗೆ ಭೇಟಿನೀಡಿ ಪರಿಹಾರ ಕೆಲಸಗಳನ್ನು ತುರ್ತಾಗಿ ನಿರ್ವಹಿಸುತ್ತಿದ್ದಾರೆ. ಜೊತೆಗೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೈ ಜೋಡಿಸಿ ಹಗಲಿರುಳು ಶ್ರಮಿಸುತ್ತಿದ್ದಾರೆ‌.

ಈಗಾಗಲೇ ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಭೂಕುಸಿತದಲ್ಲಿ ಸಿಲುಕಿದವರನ್ನು ರಕ್ಷಿಸಲು ಎನ್‌ಡಿಆರ್‌ಎಫ್, ಮಿಲಿಟರಿ ಪಡೆ, ಪೊಲೀಸ್ ಇಲಾಖೆ ಘಟನಾ ಸ್ಥಳದಲ್ಲೇ ಬೀಡು ಬಿಟ್ಟಿದೆ‌. ಕಂದಾಯ, ರಿವರ್ ರಾಪ್ಟಿಂಗ್ ಅಸೋಷಿಯೇಷನ್, ಎನ್‌ಸಿಸಿ,‌ ಗ್ರಾಮ ಪಂಚಾಯಿತಿ, ಪಶುಪಾಲನಾ ಇಲಾಖೆ, ಸ್ಥಳೀಯ ಸಂಘ ಸಂಸ್ಥೆಗಳು, ಗರುಡ ಹಾಗೂ ತಿಮ್ಮಯ್ಯ ಸಾಹಸ ಅಕಾಡೆಮಿ ಶ್ರಮಿಸುತ್ತಿದ್ದು, ಸದ್ಯ ಕೊಡಗು ನಿಯಂತ್ರಣದಲ್ಲಿದೆ.

ಜಿಲ್ಲೆಯ ಮಳೆ ವಿವರ: ಜಿಲ್ಲೆಯಲ್ಲಿ ಸರಾಸರಿ ಮಳೆ 60.68 ಮಿ.ಮೀ ಆಗಿದೆ. ಕಳೆದ ವರ್ಷ ಇದೇ ದಿನ 30.23 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿವರೆಗಿನ 1915.68 ಮಿ.ಮೀ ಮಳೆ ಬಿದ್ದಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 2839.32 ಮಿ.ಮೀ ಮಳೆಯಾಗಿತ್ತು.‌

ಸಂಪೂರ್ಣ ಜಲಾವೃತವಾಗಿರುವ ಕೊಡಗು

ಹಾರಂಗಿ ಜಲಾಶಯದ ನೀರಿನ ಮಟ್ಟ: ಜಿಲ್ಲೆಯ ಪ್ರಮುಖ ಜಲಾಶಯ ಹಾರಂಗಿಯ ಗರಿಷ್ಠ ನೀರಿನ ಮಟ್ಟ 2,859 ಅಡಿಗಳಾಗಿದ್ದು, ಪ್ರಸ್ತುತ 2853.28 ಅಡಿಗಳಷ್ಟಿದೆ‌. ಕಳೆದ ವರ್ಷ ಇದೇ ದಿನ 2856.88 ಅಡಿಗಳಷ್ಟು ನೀರಿತ್ತು .ಪ್ರಸ್ತುತ 14,606 ಕ್ಯುಸೆಕ್ ನೀರಿನ ಒಳ ಹರಿವು ಇದ್ದು, ಕಳೆದ ವರ್ಷ ಇದೇ ದಿನ 13,815 ಕ್ಯುಸೆಕ್ ಒಳ ಹರಿವು ಕಂಡು ಬಂದಿತ್ತು. ಇಂದಿನ ನೀರಿನ ಹೊರ ಹರಿವು ನದಿಗೆ 16,875 ಕ್ಯುಸೆಕ್, ನಾಲೆಗೆ 750 ಕ್ಯುಸೆಕ್ ಇದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ನದಿಗೆ 8,075 ಹಾಗೂ ನಾಲೆಗೆ 1,000 ಕ್ಯುಸೆಕ್ ಆಗಿದೆ.

ABOUT THE AUTHOR

...view details