ಮಡಿಕೇರಿ: ಪ್ರಕೃತಿ ರಮಣೀಯ ತಾಣ, ಕೊಡಗು ಒಂದಿಲ್ಲೊಂದು ವಿಚಾರಗಳಿಂದ ಸುದ್ದಿ ಆಗುತ್ತಲೇ ಇರುತ್ತದೆ. ಇದೀಗ ಕೊಡಗು ಜಿಲ್ಲೆ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ. ಕೊಡಗು ಜಿಲ್ಲೆಯ ಗ್ರಾಮವೊಂದರಲ್ಲಿ ಬೀಳುತ್ತಿರುವ ಮಳೆ ಹನಿ ನಿಜಕ್ಕೂ ಜಿಲ್ಲೆಯ ಜನತೆಯನ್ನು ಅಚ್ಚರಿಗೊಳಿಸಿದೆ. ಮಳೆ ಹನಿ ಕಂಡು ದಿಗ್ಬ್ರಮೆಗೊಂಡಿರುವ ಗ್ರಾಮದ ಜನ ಅಚ್ಚರಿಯ ಮಳೆ ನೋಡಲು ಆಗಮಿಸುತ್ತಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆರವನಾಡು ಗ್ರಾಮದಲ್ಲಿ ಈ ಅಚ್ಚರಿಯ ದೃಶ್ಯ ಕಂಡು ಬಂದಿದೆ. ಪ್ರಕೃತಿ ವೈಚಿತ್ರ್ಯವೊಂದು ಇದೀಗ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಈ ಗ್ರಾಮದ ರಸ್ತೆ ಬದಿಯಲ್ಲಿ ಮರವೊಂದರ ಬಳಿ ನಿರಂತರವಾಗಿ ಮಳೆ ಜಿನುಗುತ್ತಿದೆ. ಎಲ್ಲ ಕಡೆ ಬಿರು ಬಿಸಿಲಿದ್ದರೂ ಈ ಸ್ಥಳದಲ್ಲಿ ಮಾತ್ರ ಹಲವು ವಾರಗಳಿಂದ ನಿರಂತರವಾಗಿ ಮಳೆ ಜಿನುಗುತ್ತಿದೆ.
ಸರಿ ಸುಮಾರು 10 ಅಡಿ ವ್ಯಾಪ್ತಿಯಲ್ಲಿ ಮಾತ್ರ ಮಳೆ ಬೀಳುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇದನ್ನು ನೋಡಲು ಗ್ರಾಮದ ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಇಲ್ಲಿ ಬಿಲ್ವಪತ್ರೆ ಮರವನ್ನೇ ಹೋಲುವ ಮರವೊಂದಿದ್ದು, ಆ ಮರದ ವ್ಯಾಪ್ತಿಯಲ್ಲಿ ಮಾತ್ರ ನೀರು ಜಿನುಗುತ್ತಿದೆ. ಈ ನೀರು ಅದೇ ಮರದಿಂದ ಜಿನುಗುತ್ತಿದೆಯೋ ಅಥವಾ ಆಕಾಶದಿಂದಲೇ ಜಿನುಗುತ್ತಿದೆಯೋ ಎಂಬುದು ಸ್ಪಷ್ಟವಾಗುತ್ತಿಲ್ಲ. ಸದ್ಯ ಈ ನೀರನ್ನು ಸಂಗ್ರಹಿಸಿರುವ ಸ್ಥಳೀಯ ಗ್ರಾಮ ಪಂಚಾಯಿತಿ ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಿದೆ.
10 ಅಡಿ ವ್ಯಾಪ್ತಿಯಲ್ಲೇ ಮಳೆ ಆಗಲು ಕಾರಣವೇನು?:ಒಂದು ವೇಳೆ, ಈ ನೀರು ಮರದಿಂದಲೇ ಜಿನುಗುತ್ತಿರುವುದಾದರೆ, ಆ ಮರದಲ್ಲಿ ಅಷ್ಟೊಂದು ಪ್ರಮಾಣದ ನೀರು ಎಲ್ಲಿಂದ ಬರುತ್ತದೆ. ಬಂದರೂ ಕೂಡ ಆ ಮರ ಯಾಕಾಗಿ ನೀರನ್ನು ಸುರಿಸುತ್ತಿದೆ ಎಂದು ಗ್ರಾಮಸ್ಥರು ತಲೆಕೆಡಿಸಿಕೊಂಡಿದ್ದಾರೆ. ಇದೇ ಮರದಿಂದ 500 ಮೀಟರ್ ದೂರದಲ್ಲಿ ದೇವರ ಕಾಡಿದ್ದು, ಅಲ್ಲಿ ಭದ್ರಕಾಳಿ ದೇವರ ನೆಲೆ ಇದೆಯಂತೆ. ಬಹುಶಃ ಇದು ದೇವರ ಪವಾಡ ಇರಬಹುದೇನೋ ಅಂತ ಸ್ಥಳೀಯ ಗ್ರಾಮಸ್ಥರ ಅಭಿಪ್ರಾಯ.