ಬೆಂಗಳೂರು:ಕರಾವಳಿ ಭಾಗಗಳಲ್ಲಿ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕೈದು ದಿನಗಳ ಕಾಲ ಇನ್ನಷ್ಟು ಹೆಚ್ಚಾಗಲಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಜಿಲ್ಲೆಗಳಲ್ಲಿ ಜುಲೈ 23 ಮತ್ತು ಜುಲೈ 24 ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಳಿಕ ಜುಲೈ 25 ರಿಂದ ಮೂರು ದಿನ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗದಲ್ಲಿ ಜುಲೈ 24 ರಂದು ಹೆಚ್ಚು ಮಳೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಣೆ ಮಾಡಡಲಾಗಿದೆ. ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಜುಲೈ 24ರಂದು, ಹಾಸನದಲ್ಲಿ ಜುಲೈ 26ರವರೆಗೆ, ಯಾದಗಿರಿ, ಬೆಳಗಾವಿ ಜಿಲ್ಲೆಗಳಲ್ಲಿ ಜುಲೈ 24ರವರೆಗೆ ಯೆಲ್ಲೋ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ ಎಂದು ಇಲಾಖೆ ಹೇಳಿದೆ.
ಶನಿವಾರವೂ ಮುಂದುವರೆದ ವರ್ಷಧಾರೆ:ರಾಜ್ಯದ ಹಲವೆಡೆ ಶನಿವಾರವೂ ಮಳೆ ಅಬ್ಬರ ಮುಂದುವರೆದಿದೆ. ಬಾಗಲಕೋಟೆ, ಚಿಕ್ಕಮಗಳೂರು, ಬೆಳಗಾವಿ, ಹಾವೇರಿ, ಕೊಡಗು, ಮಂಡ್ಯ, ಯಾದಗಿರಿ ಸೇರಿ ಹಲವೆಡೆ ವರುಣಾರ್ಭಟ ಜೋರಾಗಿದೆ.
ವಾಡಿಕೆಗಿಂತ ಹೆಚ್ಚು ಸುರಿದ ಮಳೆ:ಜುಲೈ 1ರಿಂದ 22 ರವರೆಗೆ ರಾಜ್ಯಾದ್ಯಂತ ವಾಡಿಕೆಯ ಪ್ರಕಾರ 192 ಮಿಮೀ ಮಳೆ ಆಗಬೇಕಿತ್ತು. ಆದರೆ 215 ಮಿಮೀ ಸುರಿದಿದೆ. ಶೇಕಡ 12ಕ್ಕಿಂತ ಹೆಚ್ಚು ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ವಾಡಿಕೆಗಿಂತ ಶೇಕಡ 20 ಹೆಚ್ಚು ವರ್ಷಧಾರೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳಗಾವಿಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು:ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಹರಿಯುತ್ತಿರುವ ನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ನಿಪ್ಪಾಣಿ ತಾಲೂಕು ಕಾರದಗಾ ಗ್ರಾಮದ ಆರಾಧ್ಯ ದೈವ ಬಂಗಾಲಿ ಬಾಬಾ ದರ್ಗಾ ಜಲದಿಗ್ಭಂಧನಕ್ಕೊಳಗಾಗಿದೆ. ದೂಧ್ ಗಂಗಾ ನದಿ ನೀರಿನಿಂದಾಗಿ ಬಾಬಾನ ದರ್ಶನ ಬಂದ್ ಆಗಿದೆ. ಜೊತೆಗೆ ಕೃಷ್ಣಾ ನದಿಯಲ್ಲಿಯೂ ನೀರಿನ ಒಳ ಹರಿವು ಅಧಿಕವಾಗಿದೆ ಹೆಚ್ಚಳವಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ 91 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ.
ಇದನ್ನೂ ಓದಿ:ಉಕ್ಕಿ ಹರಿದ ದೂಧ್ ಗಂಗಾ ಕೃಷ್ಣಾ 16 ಸೇತುವೆಗಳು ಜಲಾವೃತ ಬಂಗಾಲಿ ಬಾಬಾ ದರ್ಗಾಕ್ಕೂ ಜಲ ದಿಗ್ಭಂಧನ