ಕುಶಾಲನಗರ(ಕೊಡಗು): ಕ್ವಾರಂಟೈನ್ ಸೀಲ್ ಇದ್ದರೂ ಶುಂಟಿ ವಾಷಿಂಗ್ ಸೆಂಟರ್‌ನಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದ ಬಿಹಾರಿಗಳನ್ನು ಕಂಡು ಸ್ಥಳೀಯರು ಆತಂಕಕ್ಕೆ ಒಳಗಾಗಿರುವ ಘಟನೆ ಕುಶಾಲನಗರ ಸಮೀಪದ ಕೊಪ್ಪ ಬಳಿ ನಡೆದಿದೆ.
ಬಿಹಾರದಿಂದ ಕೊಪ್ಪ ಗ್ರಾಮಕ್ಕೆ ಆಗಮಿಸಿರುವ ಬಿಹಾರ ಮೂಲದ ಕಾರ್ಮಿಕರ ಕೈಯಲ್ಲಿ ಕ್ವಾರಂಟೈನ್ ಮುದ್ರೆ ಹಾಕಿದ್ದರೂ ಕೂಡ ಎಗ್ಗಿಲ್ಲದೇ ತಿರುಗಾಡುತ್ತಿದ್ದರು. ಅಲ್ಲದೇ ಎರಡು ದಿನಗಳ ಹಿಂದೆಯೇ ಕೊಪ್ಪ ಸಮೀಪ ಶುಂಟಿ ವಾಷಿಂಗ್ ಸೆಂಟರ್‌ನಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದರು ಎನ್ನಲಾಗಿದೆ.
ಕ್ವಾರಂಟೈನ್ ಸೀಲ್ ಇದ್ದರೂ ಕೂಲಿ ಕೆಲಸಕ್ಕೆ ಬಂದ ಬಿಹಾರಿಗಳು ಇದರಿಂದ ಆತಂಕಕ್ಕೆ ಒಳಗಾದ ಸ್ಥಳೀಯರು, ಈ ಬಗ್ಗೆ ನಿಗಾ ವಹಿಸಲು ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ವಿಷಯ ತಿಳಿಸಲು ಯತ್ನಿಸಿದ್ದಾರೆ. ಆದರೆ, ಪಂಚಾಯಿತಿ ಪಿಡಿಒ ದೂರವಾಣಿ ಕರೆಗಳನ್ನು ಸ್ವೀಕರಿಸದಿದ್ದರಿಂದ ಸ್ಥಳೀಯ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೈಲುಕೊಪ್ಪ ಪೊಲೀಸ್ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ, ಬಿಹಾರ ಮೂಲದ ಕಾರ್ಮಿಕರಿಗೆ ಹೊರಗೆ ಓಡಾಡದಂತೆ ಎಚ್ಚರಿಕೆ ನೀಡಿದ್ದಾರೆ.