ಕೊಡಗು :ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಸ್ವಂತ ತಮ್ಮಂದಿರೇ ಅಣ್ಣನನ್ನು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆರೋಪ ಕೇಳಿ ಬಂದಿದೆ. ಮಡಿಕೇರಿ ತಾಲೂಕಿನ ಸಂಪಾಜೆ ಸಮೀಪದ ಚೆಂಬು ಗ್ರಾಮದ ಬಳಿ ಘಟನೆ ನಡೆದಿದೆ. ಉಸ್ಮಾನ್ (63) ಮೃತ ದುರ್ದೈವಿ. ಕುದ್ರೆಪಾಯದಲ್ಲಿ ಆಸ್ತಿ ವಿಚಾರವಾಗಿ ನಡೆದ ಗಲಾಟೆಯಲ್ಲಿ ಉಸ್ಮಾನ್ ರನ್ನು ತಮ್ಮಂದಿರೆ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾರೆ. ಉಸ್ಮಾನ್ ಕುದ್ರೆಪಾಯದಲ್ಲಿ ಆಸ್ತಿ ಹೊಂದಿದ್ದು, ಅರಂತೋಡಿನಲ್ಲೂ ಇವರಿಗೆ ಜಾಗವಿದೆ. ಸದ್ಯ ಉಸ್ಮಾನ್ ಪುತ್ತೂರಿನ ಸಂಪ್ಯದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ಇನ್ನು ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಕೊಡಗು ಹೆಚ್ಚುವರಿ ಎಸ್ಪಿ ಸುಂದರ್ ರಾಜ್ ಹಾಗೂ ಸಂಪಾಜೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೊಲೆ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.
ಕಿರಿಯ ಮಗನನ್ನೆ ಕೊಂದ ತಂದೆ-ಮಗ : ಕುಡಿತದ ಚಟಕ್ಕೆ ದಾಸನಾಗಿ ಕುಟುಂಬಸ್ಥರನ್ನು ಪೀಡಿಸುತ್ತಿದ್ದ ಯುವಕನನ್ನು ಸ್ವಂತ ತಂದೆ ಮತ್ತು ಅಣ್ಣನೇ ಹೊಡೆದು ಸಾಯಿಸಿರುವ ಘಟನೆ 10 ರಂದು ನಡೆದಿತ್ತು. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದ ಸೋಮಯ್ಯ ಮಹಾಲಿಂಗಯ್ಯ ಹಿರೇಮಠ (24) ಮೃತ ದುರ್ದೈವಿ. ಆರೋಪಿಗಳಾದ ತಂದೆ ಮಹಾಲಿಂಗಯ್ಯ ಗುರುಸಿದ್ದಯ್ಯ ಹಿರೇಮಠ, ಹಿರಿಯ ಮಗ ಬಸಯ್ಯ ಹಿರೇಮಠ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.