ಕೊಡಗು:ಜಿಲ್ಲೆಯಲ್ಲಿ ಮುಂಗಾರು ಇದೇ 20 ರಿಂದ ಚುರುಕುಗೊಳ್ಳುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಸಮೀಪದ ದುಬಾರೆ ಕಾಡಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ಅರಣ್ಯ ಇಲಾಖೆ ನಿಷೇಧಿಸಿದೆ.
ಕಳೆದೊಂದು ವಾರದಿಂದ ಕಾವೇರಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ನದಿ ದಾಟಿ ಆನೆ ಶಿಬಿರಕ್ಕೆ ಹೋಗುವುದು ಅಪಾಯವೆಂಬ ಕಾರಣಕ್ಕೆ ಒಂದು ತಿಂಗಳು ಪ್ರವಾಸಿಗರ ಪ್ರವೇಶವನ್ನು ಅರಣ್ಯ ಇಲಾಖೆ ನಿಷೇಧಿಸಿದೆ. ಇದನ್ನು ತಿಳಿಯದೆ ದುಬಾರೆಗೆ ಆಗಮಿಸುತ್ತಿರುವ ಪ್ರವಾಸಿಗರು ಆನೆ ಶಿಬಿರಕ್ಕೆ ತೆರಳಲು ಸಾಧ್ಯವಾಗದೆ ನದಿ ಪಾತ್ರದಲ್ಲೇ ಪೋಟೊ ಕ್ಲಿಕ್ಕಿಸಿಕೊಳ್ಳುತ್ತಾ ಹಾಗೂ ಕುದುರೆ ಸವಾರಿ ಮಾಡುತ್ತಾ ಮನರಂಜನೆ ಪಡೆಯುತ್ತಿದ್ದಾರೆ.
ದುಬಾರೆ ಕಾಡಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶ ನಿಷೇಧ ರಿವರ್ ರಾಫ್ಟಿಂಗ್ ಹಾಗೂ ಸಾಕಾನೆ ಶಿಬಿರ ಆಕರ್ಷಣೆ:
ಮಳೆಗಾಲ, ಚಳಿಗಾಲದಲ್ಲಿ ಈ ನದಿಯಲ್ಲಿ ರಾಫ್ಟಿಂಗ್ ಅನುಭವ ಪಡೆಯುವ ಪ್ರವಾಸಿಗರು, ಬೇಸಿಗೆಯಲ್ಲಿ ನದಿಗಿಳಿದು ಖುಷಿ ಪಡ್ತಾರೆ. ಅದಾದ ಬಳಿಕ ನದಿ ದಾಟಿ ಆನೆ ಶಿಬಿರಕ್ಕೆ ಹೋಗಿ ಅಲ್ಲಿನ ಆನೆಗಳೊಂದಿಗೆ ಬೆರೆಯುತ್ತಾರೆ. ಇಲ್ಲಿ ಪ್ರವಾಸಿಗರು ಹಾಗೂ ಶಿಬಿರದ ಸಿಬ್ಬಂದಿ ಕುಟುಂಬಗಳು ಬೇಸಿಗೆಯಲ್ಲಿ ನದಿಯಲ್ಲಿ ಇಳಿದು ಆನೆ ಶಿಬಿರಕ್ಕೆ ಹೋಗಬಹುದು. ಆದರೆ ಮಳೆಗಾಲದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಅದು ಸಾಧ್ಯವಿಲ್ಲ. ಸದ್ಯ ಪ್ರವಾಸಿಗರಿಗೆ ನೀರಿನಲ್ಲಿ ಸುಳಿ ಇದೆ ಎಂಬ ಎಚ್ಚರಿಕೆಯ ಸೂಚನಾ ಫಲಕಗಳನ್ನು ಅಳವಡಿಸಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಸ್ನೇಹಿತರೊಂದಿಗೆ ದಾವಣಗೆರೆಯಿಂದ ದುಬಾರೆ ಸಾಕಾನೆ ಶಿಬಿರ ನೋಡಲು ನಾವು ಬಂದಿದ್ದೇವೆ. ಇದೀಗ ಆನೆ ಶಿಬಿರಕ್ಕೆ ಹೋಗಬಾರದೆಂದು ಹೇಳಿದ್ದಾರೆ. ಇದರಿಂದ ಬೇಸರವಾಗಿದೆ. ಇಲ್ಲಿ ದೋಣಿ ವ್ಯವಸ್ಥೆಯೂ ಇಲ್ಲ. ಕನಿಷ್ಠ ತೂಗು ಸೇತುವೆಯನ್ನಾದರೂ ಮಾಡಿದರೆ ಎಲ್ಲರಿಗೂ ಅನುಕೂಲವಾಗುತ್ತೆ ಎಂದು ಪ್ರವಾಸಿ ವಿದ್ಯಾಶ್ರೀ ಹೇಳಿದರು.
ಆನೆ ಶಿಬಿರ ನೋಡಲು ಅವಕಾಶ ಮಾಡಿಕೊಟ್ಟಿದ್ದರೆ ಆನೆಗಳ ಜೀವನ ಕ್ರಮದ ಬಗ್ಗೆ ತಿಳಿದುಕೊಳ್ಳಬಹುದಿತ್ತು. ಆದರೆ ಅಲ್ಲಿಗೆ ಹೋಗದಂತೆ ನಿಷೇಧ ಹೇರಿದ್ದಾರೆ.ನೀರಿನ ಪ್ರಮಾಣ ಸ್ವಲ್ಪ ಹೆಚ್ಚಿರುವುದರಿಂದ ಹಾಯ್ದು ದಡ ಸೇರುವುದೂ ಕಷ್ಟ. ಇದರಿಂದ ದೂರದಿಂದ ಬಂದಿರುವ ನಮಗೆ ಬೇಸರವಾಗಿದೆ ಎಂದು ಪ್ರವಾಸಿಗ ಅನೂಪ್ ಅಸಮಾಧಾನ ವ್ಯಕ್ತಪಡಿಸಿದ್ರು.