ಕೊಡಗು:ಕೊರೊನಾ ಎಲ್ಲ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಹಾಗೆಯೇ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಾಲಾ - ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳು ಕಾಲಮಿತಿಯಲ್ಲಿ ಪ್ರಾರಂಭವಾಗದೇ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದ ಪೋಷಕರಿಗೆ ಆತಂಕ ಎದುರಾಗಿತ್ತು.
ಹೀಗಾಗಿ ರಾಜ್ಯ ಸರ್ಕಾರ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವಂತೆ ಹೇಳಿದೆ. ಆದರೆ, ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಆನ್‌ಲೈನ್ ತರಗತಿಗಳಿಗೆ ವಿಘ್ನಗಳು ಎದುರಾಗಿವೆ.
ಕೊರೊನಾ ವೈರಸ್ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಕೊಡಲಿ ಏಟು ಕೊಟ್ಟಿದೆ. ದಿನಗಳು ಕಳೆದಂತೆ ಸೋಂಕಿನ ಆರ್ಭಟ ಕಡಿಮೆ ಆಗಬಹುದು ಎಂದು ಆಲೋಚಿಸಿದ್ದ ಸರ್ಕಾರ ಹಾಗೂ ಪೋಷಕರಿಗೆ ಕೊರೊನಾ ಆಘಾತವನ್ನೇ ಉಂಟು ಮಾಡಿದೆ.
ಆನ್‌ಲೈನ್ ತರಗತಿಗಳಿಗೆ ಹಲವಾರು ಸಮಸ್ಯೆ ಇದನ್ನು ಮನಗಂಡ ಸರ್ಕಾರ ಮನೆಯಿಂದಲೇ ವಿದ್ಯಾರ್ಥಿಗಳಿಗೆ ಯೂಟ್ಯೂಬ್, ವಾಟ್ಸ್‌ಆ್ಯಪ್ ಹಾಗೂ ಜೂಮ್ ಆ್ಯಪ್ ಹೀಗೆ ತಂತ್ರಜ್ಞಾನ ಬಳಸಿಕೊಂಡು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವಂತೆ ಹೇಳಿದೆ.
ಆದರೆ, ಕೊಡಗು ಭೌಗೋಳಿಕವಾಗಿ ಬೆಟ್ಟ, ಗುಡ್ಡಗಳಿಂದ ಕೂಡಿರುವುದರಿಂದ ನೆಟ್ವರ್ಕ್ ಸಮಸ್ಯೆ, ಸ್ಮಾರ್ಟ್‌ಫೋನ್‌ಗಳ ಕೊರತೆ ಮತ್ತು ಇವೆಲ್ಲವೂ ಇದ್ದರೂ ಸಾಕಷ್ಟು ಭಾಗಗಳಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯೇ ಇಲ್ಲವಾಗಿದೆ. ಜಿಲ್ಲೆಯ ಹಲವೆಡೆ ನೆಟ್ವರ್ಕ್ ಟವರ್‌ಗಳು ಕೆಟ್ಟುನಿಂತಿದ್ದು, ಹಲವರಿಗೆ ಆನ್‌ಲೈನ್ ತರಗತಿಗಳು ಮರಿಚೀಕೆಯಾಗಿವೆ.
ಶಾಲೆ - ಕಾಲೇಜುಗಳ ಶಿಕ್ಷಕರು ಆನ್‌ಲೈನ್ ತರಗತಿಗಳಿಗೆ ಸೇರಿಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ, ನಮ್ಮ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆ ವಿಪರೀತವಾಗಿದೆ. ನಗರ ವ್ಯಾಪ್ತಿಯಿಂದ ಸ್ವಲ್ಪ ದೂರದಲ್ಲಿರುವ ನಮಗೆ ಸರಿಯಾಗಿ ವೇಗದ ನೆಟ್ವರ್ಕ್ ಸಿಗುತ್ತಿಲ್ಲ. ಅವರು ಕಳುಹಿಸುವ ಪಾಠಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ನಿರ್ದಿಷ್ಟವಾದ ಸ್ಥಳದಲ್ಲಿ ನಿಲ್ಲಬೇಕಿದೆ. ಇದರಿಂದ ಮಕ್ಕಳಿಗೆ ತುಂಬಾ ಕಷ್ಟವಾಗುತ್ತಿದೆ ಎಂದು ಪೋಷಕರು ಹೇಳುತ್ತಿದ್ದಾರೆ.
ಕೂಲಿ ಮಾಡಿಕೊಂಡು ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಕೂಲಿ ಕಾರ್ಮಿಕರ ಮಕ್ಕಳಿಗೆ ಪೋಷಕರು ದುಬಾರಿ ಬೆಲೆಯ ಸ್ಮಾರ್ಟ್ಫೋನ್ಗಳನ್ನ ಕೊಡಿಸಲು ಆಗುತ್ತದೆಯೇ? ಸೀಮೆಎಣ್ಣೆ ದೀಪವನ್ನು ಹಚ್ಚಿಕೊಳ್ಳುತ್ತಿರುವ ಕುಟುಂಬಗಳು ಹೇಗೆ ಆನ್‌ಲೈನ್ ಪಾಠಗಳನ್ನು ಕೇಳುತ್ತಾರೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದಲೇ ಸರ್ಕಾರ ಇಂತಹ ನಿರ್ಧಾರವನ್ನು ತೆಗೆದುಕೊಂಡಿದೆ. ಎಲ್ಲರೂ ಪರಿಸ್ಥಿತಿಗೆ ಹೊಂದಿಕೊಂಡು ಬದುಕಬೇಕು. ಬದುಕಲು ಕಲಿಯಬೇಕು. ಆದರೆ, ಕೊರೊನಾ ತಂದೊಡ್ಡಿರುವ ತೀರಾ ಸಂಕಷ್ಟದ ಸಮಯದಲ್ಲಿ ಜೀವನ ನಡೆಸುವುದೇ ಕಷ್ಟದಲ್ಲಿ ಇರುವಾಗ ಸರ್ಕಾರ ಪ್ರಾರಂಭಿಸಿರುವ ಆನ್‌ಲೈನ್ ಪಾಠ ಬೋಧನೆ ಕಷ್ಟವಾಗಿದೆ ಎನ್ನುವುದು ಪೋಷಕರು ವಿದ್ಯಾರ್ಥಿಗಳ ಮಾತಾಗಿದೆ.