ಕೊಡಗು: ನಿರಂತರ ಪ್ರಾಕೃತಿಕ ವಿಕೋಪದ ನಡುವೆ ಈ ಬಾರಿ ಕೊರೊನಾ ಮಹಾಮಾರಿಯ ಕಾಟದಿಂದ ಬಸ್‌ಗಳ ಮಾಲೀಕರು ಹಾಗೂ ಚಾಲಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಜಿಲ್ಲೆಯಲ್ಲಿ 2002ರಲ್ಲಿ 212 ಖಾಸಗಿ ಬಸ್‌ಗಳು ಇದ್ದವು. ಹಲವು ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಖಾಸಗಿ ಬಸ್‌ಗಳ ಸಂಖ್ಯೆ ಕಡಿಮೆಯಾಗುತ್ತಿವೆ. 2018ರಲ್ಲಿ 159ಕ್ಕೆ ಕುಸಿದ ಬಸ್ ಸಂಖ್ಯೆ ಈ ವರ್ಷ ಲಾಕ್‌ಡೌನ್‌ಗೂ ಮೊದಲು 149ಕ್ಕೆ ತಲುಪಿತ್ತು. ಆದರೆ ಲಾಕ್‌ಡೌನ್ ಮುಗಿದರೂ ನಂತರದ ದಿನದಲ್ಲಿ ಅಕ್ಟೋಬರ್ ಅಂತ್ಯದವರೆಗೂ ಕೇವಲ 45 ಬಸ್‌ಗಳು ಓಡಾಟ ಆರಂಭಿಸಿವೆ.
ಇದನ್ನೂ ಓದಿ:ವೈನ್ಸ್ ಎದುರು ಅಪಘಾತ: ಶವ ಮುಂದಿಟ್ಟು ಪ್ರತಿಭಟಿಸಿದ ಗ್ರಾಮಸ್ಥರು!
ಕೊರೊನಾ ಬಳಿಕ ರಸ್ತೆ ತೆರಿಗೆ ತಪ್ಪಿಸಿಕೊಳ್ಳುವ ಉದ್ದೇಶದಿಂದ ಖಾಸಗಿ ಬಸ್‌ಗಳ ಮಾಲೀಕರು ಬಸ್‌ಗಳನ್ನು ಸಾರಿಗೆ ಇಲಾಖೆಗೆ ಒಪ್ಪಿಸಿದ್ದಾರೆ. ಅನಿವಾರ್ಯ ಕಾರಣಗಳಿಂದ ಬಸ್‌ಗಳು ನಿಗದಿತ ಮಾರ್ಗದಲ್ಲಿ ಸಂಚರಿಸಲು ಅಸಾಧ್ಯವಾದಲ್ಲಿ ಅಂತಹ ವಾಹನಗಳನ್ನು ನಿರ್ದಿಷ್ಟ ತಿಂಗಳಿಗೆ ಸಾರಿಗೆ ಇಲಾಖೆಗೆ ಒಪ್ಪಿಸುವ ಅವಕಾಶವಿದೆ. ಈ ಅವಧಿಯಲ್ಲಿ ಬಸ್‌ಗೆ ತೆರಿಗೆ ಕಟ್ಟುವ ಅಗತ್ಯವಿಲ್ಲ. ಅದೇ ರೀತಿ ಕೊಡಗಿನ 104 ಖಾಸಗಿ ಬಸ್‌ಗಳನ್ನು ಏಪ್ರಿಲ್‌ನಲ್ಲಿ ಒಪ್ಪಿಸಲಾಗಿದ್ದು, ಇದು ಅಕ್ಟೋಬರ್‌ವರೆಗೂ ಮುಂದುವರೆದಿತ್ತು. ಅಕ್ಟೋಬರ್‌ವರೆಗೆ ಕೇವಲ 45 ಬಸ್‌ಗಳು ಸಂಚಾರ ಆರಂಭಿಸಿವೆ.
ಮಾಲೀಕರು ಈ ವರ್ಷ ಬಸ್ ಓಡಿಸುವುದೇ ಕಷ್ಟಕರವಾಗಿದೆ. ಈಗಾಗಲೇ ಬಸ್ ಓಡಿಸುವವರು ಡೀಸೆಲ್ ದರ ಹೆಚ್ಚಾದರೂ ಟಿಕೆಟ್ ಬೆಲೆ ಹೆಚ್ಚು ಮಾಡುವಂತಿಲ್ಲ. ಅಗತ್ಯ ಬಿಡಿ ಭಾಗಗಳ ಬೆಲೆ ಏರುತ್ತಲೇ ಇದೆ. ಆದರೆ ಪ್ರಯಾಣಿಕರಿಗೆ ಈ ಹೊರೆ ಹಾಕುವಂತಿಲ್ಲ. ಕಾರು, ಜೀಪ್, ವ್ಯಾನ್ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿ ಖಾಸಗಿ ಬಸ್ ಪ್ರಯಾಣಿಕರ ಸಂಖ್ಯೆಯಲ್ಲೂ ಭಾರೀ ಕುಸಿತವಾಗಿದೆ. ಸಿಬ್ಬಂದಿ ವೇತನ, ಸರ್ಕಾರದ ತೆರಿಗೆ, ವಿಮೆ ವೆಚ್ಚದ ಹೊರೆಯೂ ಇದೆ. ಅನೇಕ ಮಾರ್ಗಗಳಲ್ಲಿ ಹಲವು ಬಸ್‌ಗಳು ಪ್ರಯಾಣಿಕರು ಇಲ್ಲದೆ ಖಾಲಿ ಸಂಚರಿಸುತ್ತಿವೆ. ಪ್ರಯಾಣಿಕರಿಗೆ ಸೇವೆ ನೀಡಬೇಕೆಂದು ನಾವು ಕಷ್ಟದಲ್ಲಿಯೇ ಬಸ್ ಸಂಚಾರ ನಡೆಸುತ್ತಿದ್ದೆವು. ಆದರೆ ಇದೇ ಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಕ್ಕೆ ಸೇವೆ ಕೊಡುವುದೇ ಕಷ್ಟ ಎನ್ನುತ್ತಾರೆ ಖಾಸಗಿ ಬಸ್ ಮಾಲೀಕರು.