ಕೊಡಗು: ಕಳೆದ ಕೆಲವು ದಿನಗಳಿಂದ ಹುಲಿ ದಾಳಿ ಹೆಚ್ಚಾಗಿರುವ ಪರಿಣಾಮ ಜಿಲ್ಲೆಯ ಜನತೆ ಭಯದಲ್ಲಿಯೇ ಜೀವನ ಸಾಗಿಸುವಂತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ದೂರು ನೀಡಿದ್ರೂ, ಹುಲಿ ಹಿಡಿಯುವ ಕಾರ್ಯ ಮಾತ್ರ ನಡೆದಿಲ್ಲ. ಹೀಗಾಗಿ ಆಕ್ರೋಶಗೊಂಡಿರುವ ಜನರು ಪೊನ್ನಂಪೇಟೆ ತಾಲೂಕು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 15 ದಿನಗಳಲ್ಲಿ ಸುಮಾರು 15ಕ್ಕೂ ಹೆಚ್ಚು ಜಾನುವಾರು ಹಾಗೂ ಮೂವರು ವ್ಯಕ್ತಿಗಳನ್ನು ಬಲಿ ಪಡೆದಿರುವ ಹುಲಿಯನ್ನು ಸೆರೆಹಿಡಿಯಲೇಬೇಕೆಂದು ರೈತಸಂಘ ಒತ್ತಾಯಿಸಿದೆ. ಇಂದು ಮುಂಜಾನೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಪೊನ್ನಂಪೇಟೆ ತಾಲೂಕು ಬಂದ್ ಮಾಡಿ ಅರಣ್ಯ ಇಲಾಖೆಯ ವಿರುದ್ದ ಪ್ರತಿಭಟನೆ ನಡೆಸಲಾಯಿತು.