ಕೊಡಗು: ಲಂಚ ಪಡೆಯುತ್ತಿದ್ದಾಗ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಕಾನ್ಸ್ಟೆಬಲ್ ಸಜನ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಮಣ್ಣು ಸಾಗಿಸುತ್ತಿದ್ದ ಲಾರಿ ತಡೆದ ಸಜನ್ ಕೇಸ್ ಹಾಕದೆ, ಲಾರಿ ಚಾಲಕ ಮಡಿಕೇರಿ ತಾಲೂಕಿನ ಬಿಳಿಗೇರಿಯ ಕಿರಣ್ಗೆ, ಅಕ್ರಮವಾಗಿ ಮಣ್ಣು ಸಾಗಿಸುತ್ತಿದ್ದೀರಾ, ಕೇಸ್ ಹಾಕುತ್ತೇವೆ ಎಂದು ಹೆದರಿಸಿದ್ದಾರೆ. ಕೇಸ್ ಹಾಕುತ್ತಾರೆ ಎನ್ನುವ ಭಯದಲ್ಲಿ ಪೊಲೀಸ್ ಬಳಿ ಲಾರಿ ಚಾಲಕ ರಿಕ್ವೆಸ್ಟ್ ಮಾಡಿಕೊಂಡಾಗ ಮತ್ತಷ್ಟು ಭಯಪಡಿಸಿದ್ದಾರೆ. ಅಷ್ಟೇ ಅಲ್ಲದೇ ಮೂವತ್ತು ಸಾವಿರ ರೂಪಾಯಿ ಲಂಚ ಬೇಡಿಕೆ ಇಟ್ಟು, ಹಣ ಕೊಟ್ಟರೆ ಬಿಡುತ್ತೇನೆ, ಇಲ್ಲವೆಂದರೆ ಕೇಸ್ ಹಾಕಿ ಲಾರಿ ಸೀಜ್ ಮಾಡಬೇಕಾಗುತ್ತದೆ ಎಂದು ಬೆದರಿಸಿದ್ದಾಗಿ ಆರೋಪಿಸಲಾಗಿದೆ.
ಆ ಸಂದರ್ಭದಲ್ಲಿ ಕಾನ್ಸ್ಟೆಬಲ್ ಬೇಡಿಕೆ ಇಟ್ಟಷ್ಟು ಹಣ ತನ್ನ ಬಳಿ ಇಲ್ಲದ ಕಾರಣ, ಆ ಕ್ಷಣಕ್ಕೆ ಅಷ್ಟು ಹೊಂದಿಸಲಾಗದೆ, ಚಾಲಕ ಕಿರಣ್ ತನ್ನ ಬಳಿ ಇದ್ದ ನಾಲ್ಕು ಸಾವಿರ ರೂ ಹಾಗೂ ಇನ್ನೂ 3,500 ರೂ ಸಾಲ ಮಾಡಿ ಹೊಂದಿಸಿ ಕಾನ್ಸ್ಟೆಬಲ್ಗೆ ಕೊಟ್ಟಿದ್ದರು. ಬಾಕಿ ಇರುವ ಹಣವನ್ನು ಗುರುವಾರವೇ ನೀಡಬೇಕು ಎಂದು ಕಾನ್ಸ್ಟೆಬಲ್ ಎಚ್ಚರಿಕೆ ನೀಡಿದ್ದರು. ಕಿರಣ್ ತನ್ನ ಬಳಿ ಅಷ್ಟೊಂದು ಹಣವಿಲ್ಲ ಎಂದು ಹೇಳಿ, 10 ಸಾವಿರ ರೂ ನೀಡುವುದಾಗಿ ಒಪ್ಪಿದ್ದರು. ಪೊಲೀಸರ ವರ್ತನೆಗೆ ಬೇಸತ್ತ ಕಿರಣ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.