ಕರ್ನಾಟಕ

karnataka

ETV Bharat / state

ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಬೇಕು: ಸಚಿವ ಎನ್​.ಎಸ್​ ಬೋಸರಾಜು - ಈಟಿವಿ ಭಾರತ್​ ಕನ್ನಡ ನ್ಯೂಸ್

ಇದುವರೆಗೆ ಕಾವೇರಿ ವಿಚಾರದಲ್ಲಿ ಸರ್ವಪಕ್ಷ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಸಮಯ ಕೊಟ್ಟಿಲ್ಲ ಎಂದು ಸಚಿವ ಎನ್​.ಎಸ್​ ಬೋಸರಾಜು ಹೇಳಿದರು.

ಸಚಿವ ಎನ್​.ಎಸ್​ ಬೋಸರಾಜು
ಸಚಿವ ಎನ್​.ಎಸ್​ ಬೋಸರಾಜು

By ETV Bharat Karnataka Team

Published : Sep 25, 2023, 6:51 PM IST

Updated : Sep 25, 2023, 7:38 PM IST

ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಬೇಕು

ಕೊಡಗು :ಸಿಎಂ ಸಿದ್ದರಾಮಯ್ಯ ಅವರು ಸರ್ವ ಪಕ್ಷಗಳ ಸಭೆ ನಡೆಸಿದ್ದಾರೆ. ಎರಡು ಬಾರಿ ಪ್ರಧಾನಿಯವರಿಗೆ ಪತ್ರ ಬರೆದು ಸರ್ವಪಕ್ಷ ನಿಯೋಗ ಭೇಟಿಗೆ ಮನವಿ ಮಾಡಿದ್ದಾರೆ. ಆದರೆ ಇದುವರೆಗೆ ಪ್ರಧಾನಿ ನರೇಂದ್ರ ಮೋದಿ ಸಮಯ ಕೊಟ್ಟಿಲ್ಲ. ಸುಪ್ರೀಂಕೋರ್ಟ್, ಟ್ರಿಬ್ಯುನಲ್​ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಅಂದ ಮೇಲೆ ಕೇಂದ್ರ ಸರ್ಕಾರ, ಪ್ರಧಾನಿಯವರು ಮಧ್ಯಪ್ರವೇಶಿಸಬೇಕು ಎಂದು ಕೊಡಗು ಉಸ್ತುವಾರಿ ಸಣ್ಣ ನೀರಾವರಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್​.ಎಸ್​ ಬೋಸರಾಜ್ ಹೇಳಿದ್ದಾರೆ.

ಪ್ರಧಾನಿಯವರು ಇದುವರೆಗೆ ಕಾವೇರಿ ವಿಚಾರದ ಬಗ್ಗೆ ಮಾತನಾಡುತ್ತಿಲ್ಲ. ಪ್ರತಿಭಟನಾಕಾರರು ಲೋಕಸಭಾ, ರಾಜ್ಯಸಭಾ ಸದಸ್ಯರು ರಾಜೀನಾಮೆ ನೀಡಬೇಕು ಎನ್ನುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದಾರೆ. ಅವರು ಪ್ರಧಾನಿಯವರ ಬಳಿ ಬಾಯಿ ಬಿಚ್ಚಬೇಕು ಎಂದರು. ಐಎನ್​ಡಿಐಎ ಮೈತ್ರಿಗೆ ಅನುಕೂಲ ಆಗಲೆಂದು ತಮಿಳುನಾಡಿಗೆ ನೀರು ಬಿಡಲಾಗುತ್ತದೆ ಎಂಬ ಆರೋಪಕ್ಕೆ ಹಿನ್ನೆಲೆಯಲ್ಲಿ ಬೋಸರಾಜು ಪ್ರತಿಕ್ರಿಯೆ ನೀಡಿ, ತಮಿಳುನಾಡಿನಲ್ಲಿ ಇರುವುದು ಡಿಎಂಕೆ ಹೊರತು ಕಾಂಗ್ರೆಸ್ ಪಕ್ಷ ಅಲ್ಲ. ಕೇಂದ್ರದಲ್ಲಿ ಅವರದೇ ಪಾರ್ಟಿ ಇದೆಯಲ್ಲ ಸಮಸ್ಯೆ ಬಗೆಹರಿಸಲಿ.

ವಿಧಾನಸಭೆಚುನಾವಣೆ ಸಂದರ್ಭ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ 26 ಬಾರಿ ಬಂದು ಹೋದರು. ಆದರೆ ಕಾವೇರಿ ವಿಚಾರದಲ್ಲಿ ರಾಜ್ಯದ ಪರಿಸ್ಥಿತಿಯನ್ನು ಮೋದಿ ಅವರಿಗೆ ಬಿಜೆಪಿ ಮನವರಿಕೆ ಮಾಡಿಕೊಡಲಾಗಿಲ್ಲ. ಎಷ್ಟು ಬಾರಿ ಕೇಳಿದರೂ ಸರ್ವಪಕ್ಷ ಸಭೆಗೆ ಸಮಯ ನೀಡುತ್ತಿಲ್ಲ. ಎಲ್ಲದಕ್ಕೂ ಉತ್ತರ ಅವರಲ್ಲಿಯೇ ಇರುತ್ತದೆ. ಆದರೆ ರಾಜಕೀಯವಾಗಿ ಮಾತನಾಡುವುದನ್ನು ಬಿಟ್ಟು, ಎಲ್ಲರೂ ಒಂದಾಗಿ ಈ ಸಮಸ್ಯೆಯನ್ನು ಎದುರಿಸಬೇಕು. ಪ್ರಧಾನಿಯವರು ಮಧ್ಯ ಪ್ರವೇಶಿಸಬೇಕು. ಮೂರು ರಾಜ್ಯದವರನ್ನು ಕರೆದು ಸುಪ್ರೀಂ ಕೋರ್ಟ್ ಹೊರಗೆ ಈ ಸಮಸ್ಯೆ ಬಗೆಹರಿಸಲಿ ಎಂದರು.

ಮಡಿಕೇರಿ ದಸರಾ ಪೂರ್ವಭಾವಿ ಸಭೆ : ಐತಿಹಾಸಿಕ ಮಡಿಕೇರಿ ದಸರಾಗೆ ಕೆಲವೇ ದಿನಗಳು ಬಾಕಿ ಇದ್ದು, ಬೋಸರಾಜು ನೇತೃತ್ವದಲ್ಲಿ ಪೂರ್ವಭಾವಿ ಸಭೆ ಸೋಮವಾರ ನಡೆಯಿತು‌. ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಯಿತು. ಈಗಾಗಲೇ ಕರಗ ಸಾಗುವ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಶೀಘ್ರವಾಗಿ ರಸ್ತೆಗಳ ದುರಸ್ತಿ ಮಾಡುವಂತೆ ಒತ್ತಾಯ ಕೇಳಿಬಂತು. ಜೊತೆಗೆ ಕಳೆದ ಬಾರಿ ದಸರಾಕ್ಕೆ ಬಿಡುಗಡೆಯಾದ ಹಣದಲ್ಲಿ 25 ಲಕ್ಷ ಬಾಕಿ ಇದ್ದು ಹಿಂದಿನ ವರ್ಷದ ಅನುಧಾನ ಬಿಡುಗಡೆ ಮಾಡುವಂತೆ ಉಸ್ತುವಾರಿ ಸಚಿವರ ಬಳಿ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಬೋಸರಾಜು ಮಡಿಕೇರಿ ದಸರಾ ಐತಿಹಾಸಿಕ ಹಿನ್ನಲೆಯನ್ನು ಹೊಂದಿದೆ. ಹೀಗಾಗಿ ನಮ್ಮಲಿರುವ ಬಜೆಟ್ ನಲ್ಲಿ ದಸರಾ ಮಾಡಲು ಸಿದ್ಧತೆ‌ ಮಾಡಿಕೊಳ್ಳಲಾಗಿದೆ. ಈಗಾಗಲೇ ಎಲ್ಲರೂ ಮನವಿ‌ ಸಲ್ಲಿಸಿದಂತೆ ಹೆಚ್ಚಿನ ಅನುದಾನ ತರುವಲ್ಲಿ ನಾವು ಕೂಡ ಪ್ರಯತ್ನಿಸುತ್ತಿದ್ದೇವೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮಾತನಾಡಿ ಮಡಿಕೇರಿಯ ಐತಿಹಾಸಿಕ ದಸರವನ್ನು ಅಚ್ಚುಕಟ್ಟಾಗಿ ಮಾಡೋದಾಗಿ ಭರವಸೆ ನೀಡಿದರು.

ಇದನ್ನೂ ಓದಿ :ಕಾವೇರಿ ನೆಪದಲ್ಲಿ ಬಿಜೆಪಿ, ಜೆಡಿಎಸ್​​ ರಾಜಕೀಯ: ಸಿಎಂ ಸಿದ್ದರಾಮಯ್ಯ

Last Updated : Sep 25, 2023, 7:38 PM IST

ABOUT THE AUTHOR

...view details