ಕೊಡಗು : ಇಡೀ ದೇಶಾದ್ಯಂತ ಕಿಚ್ಚು ಹೊತ್ತಿಸಿರುವ ಮಸೀದಿ ಧ್ವನಿವರ್ಧಕ ವಿವಾದವನ್ನು ಕೊಡಗು ಜಿಲ್ಲೆಯ ಜಿಲ್ಲಾಧಿಕಾರಿ ತಮ್ಮದೇ ಆದ ರೀತಿಯಲ್ಲಿ ಬಗೆಹರಿಸಲು ಮುಂದಾಗಿದ್ದಾರೆ. ಕಾನೂನು ಪಾಲನೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿ ಶಬ್ದ ಮಾಲಿನ್ಯ ಮಾಡದೆ ಧಾರ್ಮಿಕ ಆಚರಣೆಗೆ ಅನುಕೂಲ ಕಲ್ಪಿಸುವತ್ತ ಚಿತ್ತ ಹರಿಸಿದ್ದಾರೆ.
ಮಸೀದಿಗಳಲ್ಲಿ ಮೊಳಗುವ ಆಜಾನ್ ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಎಂದು ಆರೋಪಿಸಿ ಹಿಂದೂ ಪರ ಸಂಘಟನೆಗಳು ಬೀದಿಗಿಳಿದಿದ್ದು ವಿವಾದ ತಾರಕಕ್ಕೇರಿದೆ. ಆಜಾನ್‌ಗೆ ಪ್ರತಿಯಾಗಿ ದೇವಸ್ಥಾನಗಳಲ್ಲಿ ಸುಪ್ರಭಾತ ಮೊಳಗಿಸಿ ಪ್ರತಿಭಟನೆ ನಡೆಸಲಾಗಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರದ 2002ರ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ.
2002ರ ರಾಜ್ಯ ಸರ್ಕಾರದ ಆದೇಶದ ಆಧಾರದ ಮೇಲೆ ಕಾನೂನು ಜಾರಿಗೆ ಮುಂದಾಗಿದ್ದು, ಧ್ವನಿವರ್ಧಕಗಳ ಶಬ್ದ ಸರ್ಕಾರ ನಿಗದಿ ಮಾಡಿದ ಪ್ರಮಾಣಕ್ಕಿಂತ ಹೆಚ್ಚಿದ್ದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಅದರಂತೆ ಇದೀಗ ಕೊಡಗು ಜಿಲ್ಲಾಡಳಿತ ಧಾರ್ಮಿಕ ಕ್ಷೇತ್ರಗಳು ಸೇರಿದಂತೆ, ಇತರೆ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ಪಡೆಯುವಂತೆ ಸೂಚಿಸಿದೆ. ಮಾತ್ರವಲ್ಲ ಈ ನಿಟ್ಟಿನಲ್ಲಿ ಮೇ 25ರ ಒಳಗೆ ಅರ್ಜಿ ಸಲ್ಲಿಸುವಂತೆ ಗಡುವು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ ಸತೀಶ್ ಅವರು ಹೇಳಿದ್ದಾರೆ.