ಮಡಿಕೇರಿ: ಜಲ ಪ್ರಳಯ ಸಂಭವಿಸಿ ನಾಲ್ಕು ವರ್ಷಗಳೇ ಕಳೆದರು ಇನ್ನೂ ಈ ಗ್ರಾಮದ ಜನ ಭಯದ ನೆರಳಿನಿಂದ ಇನ್ನೂ ಹೊರ ಬಂದಿಲ್ಲ. ಸಂಕಷ್ಟದಲ್ಲೇ ಜೀವನ ಮಾಡುತ್ತಿದ್ದಾರೆ. ಕೊಡಗಿನಲ್ಲಿ 2018 ರ ಜಲಪ್ರಳಯದ ಕರಿ ನೆರಳು ಇನ್ನೂ ಇದೆ. ರಸ್ತೆಯಿಲ್ಲದೇ ಸುತ್ತಿ ಸುತ್ತಿ ಮನೆಗೆ ಹೋಗುವ ಪರಿಸ್ಥತಿ ಇಲ್ಲಿನವರದ್ದು.ಅಷ್ಟೇ ಅಲ್ಲದೆ ಜನ ಪ್ರತಿ ನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಈ ಗ್ರಾಮ ಒಳಗಾಗಿದೆ. ಪ್ರಸ್ತುತ ಮಳೆ ಹಾನಿ ಪ್ರದೇಶಗಳಿಗೆ ಡಾ. ಮಂತರ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಡಿಕೇರಿ ತಾಲೂಕಿನ ಎರಡನೆ ಮೊಣ್ಣಂಗೇರಿಯಲ್ಲಿ ಭಾರೀ ಸಂಕಷ್ಟ ಎದುರಾಗಿದೆ. ಮಡಿಕೇರಿ ತಾಲೂಕಿನ ಗಾಳಿ ಬೀಡು ಪಂಚಾಯತ್ ವ್ಯಾಪ್ತಿಗೆ ಒಳ ಪಡುವ ಎರಡನೆ ಮೊಣ್ಣಂಗೇರಿಯಲ್ಲಿ 2018 ರಲ್ಲಿ ನಡೆದ ಪಕೃತಿ ವಿಕೋಪದಿಂದಾಗಿ ಭಾರಿ ತೊಂದರೆ ಎದುರಾಗಿತ್ತು. ಅಕ್ಷರಶಃ ಜನ ನಲುಗಿ ಹೋಗಿದ್ರು. ಸರ್ಕಾರ ಈವರೆಗೂ ಅವರಿಗೆ ಸರಿಯಾದ ಸೌಕರ್ಯ ಕಲ್ಪಿಸದೇ ನರಕ ದರ್ಶನ ಮಾಡಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ.
ಸಂಪರ್ಕ ರಸ್ತೆಗಳೇ ಇಲ್ಲ: ಇಲ್ಲಿ ನೂರಾರು ಮನೆಗಳು ಇದ್ದರೂ ಇಲ್ಲಿಗೆ ಸರಿಯಾದ ರಸ್ತೆ ಸಂಪರ್ಕವೇ ಇಲ್ಲ. ಇರೋ ಒಂದು ರಸ್ತೆ ಕೂಡ ಸಂಪೂರ್ಣವಾಗಿ ಹದಗೆಟ್ಟಿದ್ದು, ಜನರು ನಿತ್ಯ ಪರದಾಡುವ ಪರಿಸ್ಥಿತಿ ಎದುರಾಗಿದೆ. ಭಾರಿ ಗುಡ್ಡ ಕುಸಿತದಿಂದಾಗಿ ಇದ್ದ ಒಂದು ರಸ್ತೆಕೂಡ ಇಲ್ಲದಂತಾಗಿದ್ದು, ಕಾಡು ದಾರಿಯಲ್ಲೇ ನಡೆದು ಮನೆ ಸೇರುವ ಪರಿಸ್ಥಿತಿ ಎದುರಾಗಿದೆ.