ಕೊಡಗಿನಲ್ಲಿ ಪನ್ಯ ಬೆಳ್ಳಾರಿಕಮ್ಮ ದೇವಿ ಉತ್ಸವ ಕೊಡಗು :ಕೊಡಗು ವಿಭಿನ್ನ ಸಂಸ್ಕೃತಿ ಹೊಂದಿರುವ ನಾಡು. ಜಿಲ್ಲೆಯಲ್ಲೀಗ ಊರು ಹಬ್ಬಗಳ ಸಂಭ್ರಮ ಮನೆ ಮಾಡಿದೆ. ಸುಂಟಿಕೊಪ್ಪ ಸಮೀಪದಲ್ಲಿ ಪನ್ಯ ಬೆಳ್ಳೇರಿಕಮ್ಮ ದೇವಿ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಭಕ್ತರು ದೇವರಿಗೆ ವಿವಿಧ ಆಟಗಳ ಮೂಲಕ ವಿಶೇಷ ರೀತಿಯಲ್ಲಿ ಭಕ್ತಿ ಸಮರ್ಪಿಸಿದ್ದಾರೆ.
ಮಂದನ ಮನೆ ಸ್ಥಾನದಿಂದ ಬೆಳ್ಳೇರಿಕಮ್ಮ ದೇವಿ ಭಂಡಾರ ಹಾಗೂ ಕಾಳಶೆಟ್ಟಿ ಮನೆಯಿಂದ ಅಯ್ಯಪ್ಪ ದೇವರ ಭಂಡಾರ (ದೇವರ ಆಭರಣ) ಹಾಗೂ ಮಾಗುಲು ಮನೆಸ್ಥಾನದಿಂದ ಬಂದ ಎತ್ತಿನೊಂದಿಗೆ ಊರ ಮುಖ್ಯಸ್ಥರ ಸಮ್ಮುಖದಲ್ಲಿ ದೇವರಿಗೆ ಆಭರಣ ತೊಡಿಸಿ ಈ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.
ಇದನ್ನೂ ಓದಿ:ವಿಶೇಷ ವಾರ್ಷಿಕ ಹಬ್ಬ ಆಚರಣೆ: ಜಿಂಕೆ ಕೊಂಬು ಹಿಡಿದು ನೃತ್ಯ ಮಾಡಿದ ಕೊಡವರು
ದೇವರಿಗೆ ಭಕ್ತಿಯ ಪ್ರತೀಕವಾಗಿ 14 ಮನೆತನದ ತಕ್ಕ ಮುಖ್ಯಸ್ಥರು ಕೊಡಗಿನ ಸಾಂಪ್ರದಾಯಿಕ ಉಡುಪು ತೊಟ್ಟು, 7 ಬಗೆಯ ಚೌಲಿ ಕುಣಿತದ ಮೂಲಕ ದೇವರ ಭಕ್ತಿ ಸಲ್ಲಿಸುವುದು ಇಲ್ಲಿನ ಪದ್ಧತಿ. ಸುಮಾರು ಏಳು ದಿನಗಳ ಕಾಲ ನಡೆಯುವ ಆಚರಣೆಯನ್ನು ಊರವರು ಕಟ್ಟುನಿಟ್ಟಾಗಿ ನಡೆಸುತ್ತಾರೆ. ಒಂದು ವಾರ ಉಲುಗುಲಿ ಅಂಜನಗೇರಿ, ಬೆಟ್ಟಗೇರಿ, ಹರದೂರು ಮೂರು ಗ್ರಾಮದ ಜನರು ಹಬ್ಬವನ್ನು ಕಟ್ಟುಪಾಡಿಗೆ ಅನುಗುಣವಾಗಿ ಆಚರಿಸುತ್ತಾರೆ. ದೇವರಿಗೆ ಚೌಲಿ ಆಟದ ಬಳಿಕ ದೇವಸ ಆಸ್ಥನಾದಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರುತ್ತದೆ.
ಇದನ್ನೂ ಓದಿ:23ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿಗೆ ಸಿಎಂ ಬೊಮ್ಮಾಯಿ ಚಾಲನೆ..
ನಂತರ ಊರಿನ ಮಕ್ಕಳಿಗೆ, ನೆಂಟರಿಷ್ಠರಿಗೆ ಅಂಬುಕಾಯಿ (ತೆಂಗಿನಕಾಯಿ) ಎಳೆಯುವ ಆಟ ನಡೆಯುತ್ತದೆ. ಗಂಡು ಮಕ್ಕಳ ಅಂಬುಕಾಯಿ ಎಳೆಯುವ ಸ್ಪರ್ಧೆ ರೋಚಕತೆಯಿಂದ ಕೂಡಿರುತ್ತದೆ. ಹಾಗೆಯೇ ಸೂರು ಹಣ್ಣು ಎಸೆಯುವುದರೊಂದಿಗೆ ಬೆಳ್ಳೇರಿಕಮ್ಮ ದೇವರ ಜಾತ್ರಾ ಮಹೋತ್ಸವಕ್ಕೆ ತೆರೆ ಬಿತ್ತು. ಈ ಜಾತ್ರೆಗೆ ಉಲುಗುಲಿ, ಹರದೂರು ಅಂಜನಗೇರಿ ಬೆಟ್ಟಗೇರಿಯ ಮೂರು ಗ್ರಾಮದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು.
ಇದನ್ನೂ ಓದಿ:ಕಾವೇರಿ ತೀರ್ಥವನ್ನು ಹಣಕ್ಕೆ ಮಾರಾಟ ಮಾಡುವ ಇ-ಪ್ರಸಾದ ಯೋಜನೆ ಕೈ ಬಿಡುವಂತೆ ಒತ್ತಾಯ