ಕೊಡಗು: ಎಸ್ಪಿ ಸುಮನ್ ಡಿ. ಪನ್ನೇಕರ್ ನೇತೃತ್ವದಲ್ಲಿ ಡಿಸಿಐಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಅಕ್ರಮ ಮರ ದಂಧೆ ಜಾಲ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಡಗು ಪೊಲೀಸರ ಕಾರ್ಯಾಚರಣೆ: ಅಕ್ರಮವಾಗಿ ಮರ ಕಡಿಯುತ್ತಿದ್ದವರ ಬಂಧನ - kannadanews
ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರ ದಂಧೆ ಜಾಲವನ್ನು ಬೇಧಿಸುವಲ್ಲಿ ಕೊಡಗು ಪೊಲೀಸರು ಯಶಸ್ವಿಯಾಗಿದ್ದು, ಅಕ್ರಮ ಮರ ಸಾಗಾಟ ದಂಧೆಗೆ ಬ್ರೇಕ್ ಹಾಕಿದ್ದಾರೆ.
ಇಂದು ಮುಂಜಾನೆ 4 ಗಂಟೆಗೆ ಖಚಿತ ಮಾಹಿತಿ ಮೇರೆಗೆ ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಮರದ ಹುಡಿ, ಕಾಫಿಯ ಹೊಟ್ಟುಗಳನ್ನು ಹೊದಿಕೆ ಮಾಡಿ ಸಾಗಿಸ್ತಿದ್ದ ದಂಧೆಕೋರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಲ್ಕೇರಿ ಗ್ರಾಮದ ಅಕ್ರಮ ಮರ ದಂಧೆಯ ಕಿಂಗ್ ಪಿನ್ ಕಳ್ಳಿಚಂಡ ಲೋಬನ್ ಪೊಲೀಸರ ಅತಿಥಿಯಾಗಿದ್ದಾನೆ. ಕಾರ್ಯಾಚರಣೆ ವೇಳೆ ಬೀಟೆ, ಹಲಸು, ಹೆಬ್ಬಲಸು, ತೇಗದ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆ ವೇಳೆ ಒಂದು ಲಾರಿ, ಬೊಲೇರೋ, ಫಾರ್ಚೂನರ್ ಕಾರು ಜೊತೆಗೆ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಪೈಲೆಟ್ ಹಾಗೂ ಎಸ್ಕಾಟ್ ಮಾಡುವ ವಾಹನಗಳು, ಮನೆಯಲ್ಲಿದ್ದ ಕ್ರೇನ್, ಸ್ವರಾಜ್ ಮಾಜ್ಡಾ ವಶಪಡಿಸಿಕೊಳ್ಳಲಾಗಿದ್ದು, ಒಟ್ಟು ಒಂದು ಕೋಟಿಗೂ ಅಧಿಕ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಯಶಸ್ವಿ ಕಾರ್ಯಾಚರಣೆ ನಡೆಸಿದ ಡಿಸಿಐಬಿ ಕೊಡಗು ತಂಡಕ್ಕೆ ಶ್ಲಾಘನೆ ಜೊತೆಗೆ ಬಹುಮಾನ ಘೋಷಣೆ ಮಾಡಲಾಗಿದೆ.