ಕರ್ನಾಟಕ

karnataka

ETV Bharat / state

ಅಭಿವೃದ್ಧಿ ನೆಪದಲ್ಲಿ ರಾಜಾಸೀಟ್‌ನಲ್ಲಿ ಸದ್ದು ಮಾಡುತ್ತಿವೆ ಯಂತ್ರಗಳು.. - kodagu

ಈಗ ಕೊರೆದಿರುವ ಬೆಟ್ಟದ ಕೊಲ್ಲಿ ಜಾಗದಲ್ಲೇ 2018ರಲ್ಲಿ ಭಾರೀ ಬೆಟ್ಟ ಕುಸಿದಿತ್ತು. ಇದೀಗ ಮತ್ತೆ ಹಿಟಾಚಿಯಿಂದ ಇಡೀ ಬೆಟ್ಟವನ್ನು ಕೊರೆದಿರುವುದು ಮತ್ತೆ ಆಪತ್ತು ತಂದೊಡ್ಡಿದಂತೆ ಆಗಿದೆ..

kodagu
ರಾಜಾಸೀಟ್​ನ ಬೆಟ್ಟ ಕೊರೆಸಿದ ಅಧಿಕಾರಿಗಳು

By

Published : Nov 9, 2020, 3:56 PM IST

ಕೊಡಗು: ಪ್ರವಾಸಿಗರ ಹಾಟ್‌ಸ್ಟಾಟ್ ಮಡಿಕೇರಿಯ ರಾಜಾಸೀಟ್ ಸಾವಿರಾರು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಇದನ್ನೇ ನೆಪವಾಗಿಸಿಕೊಂಡಿರುವ ಅಧಿಕಾರಿಗಳು ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸುತ್ತೇವೆ ಎಂದು ರಾಜಾಸೀಟ್​ನ ಬೆಟ್ಟವನ್ನೆಲ್ಲಾ ಹಿಟಾಚಿ ಬಳಸಿ ಅಗೆಸಿದ್ದಾರೆ.

ರಾಜಾಸೀಟ್‌ಗೆ ಹೊಂದಿಕೊಂಡಿರುವ ಬೆಟ್ಟಗಳಲ್ಲಿ ಪ್ರವಾಸಿಗರಿಗೆ ಟ್ರೆಕ್ಕಿಂಗ್ ಪಾಥ್ ಮಾಡುತ್ತೇವೆ ಎಂದು ಇದ್ದ ಚಿಕ್ಕಪುಟ್ಟ ಮರಗಿಡಗಳನ್ನು ತೆಗೆದಿದ್ದಲ್ಲದೆ, ಹಂತ ಹಂತವಾಗಿ ಇಡೀ ಬೆಟ್ಟವನ್ನೆಲ್ಲಾ ಸಂಪೂರ್ಣ ಕೊರೆದಿದ್ದಾರೆ. ಟ್ರೆಕ್ಕಿಂಗ್ ಪಾಥ್, ಫ್ಲವರ್ ಗಾರ್ಡ್‍ನ್‌ಗಾಗಿ 4 ಕೋಟಿ ಬಿಡುಗಡೆಯಾಗಿದೆ.

ಇದೆಲ್ಲಾ ಕೆಲಸವನ್ನು ಕಾರ್ಮಿಕರಿಂದಲೇ ಕೆಲಸ ಮಾಡಿಸಬೇಕೆಂದು ಕ್ರಿಯಾ ಯೋಜನೆಯಲ್ಲೂ ಇದೆ. ಆದರೂ ಪ್ರವಾಸೋದ್ಯಮ ಇಲಾಖೆ, ಮತ್ತು ಪಿಡಬ್ಲ್ಯೂಡಿ ಅಧಿಕಾರಿಗಳು ಹಿಟಾಚಿಯನ್ನು ಬಳಸಿ ಇಡೀ ಬೆಟ್ಟವನ್ನು ಕೊರೆದಿದ್ದಾರೆ.

ಎಂಎಲ್‌ಸಿ ವೀಣಾ ಅಚ್ಚಯ್ಯ, ಹಿರಿಯ ರಾಜಕಾರಣಿ ಎಂ ಸಿ ನಾಣಯ್ಯ ಪರಿಶೀಲನೆ

ಕಳೆದ ಮೂರು ವರ್ಷಗಳಿಂದ ಕೊಡಗಿನಲ್ಲಿ ಎಲ್ಲೆಡೆ ಬೆಟ್ಟಗಳು ಕುಸಿದು ಬೀಳುತ್ತಿದ್ದು, ಸಾಧಾರಣ ಮಳೆ ಬಂದರೂ ಕೊಡಗಿನ ಜನರು ಆತಂಕಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಂತಹ ದುಃಸ್ಥಿತಿ ಇರುವಾಗ ಭಾರೀ ಪ್ರಮಾಣದ ಈ ಬೆಟ್ಟವನ್ನು ಕೊರೆದಿರುವುದಕ್ಕೆ ಈಗ ಜಿಲ್ಲೆಯ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈಗ ಕೊರೆದಿರುವ ಬೆಟ್ಟದ ಕೊಲ್ಲಿ ಜಾಗದಲ್ಲೇ 2018ರಲ್ಲಿ ಭಾರೀ ಬೆಟ್ಟ ಕುಸಿದಿತ್ತು. ಇದೀಗ ಮತ್ತೆ ಹಿಟಾಚಿಯಿಂದ ಇಡೀ ಬೆಟ್ಟವನ್ನು ಕೊರೆದಿರುವುದು ಮತ್ತೆ ಆಪತ್ತು ತಂದೊಡ್ಡಿದಂತೆ ಆಗಿದೆ. ತಲಕಾವೇರಿಯ ಗಜಗಿರಿ ಬೆಟ್ಟದಲ್ಲೂ ಅರಣ್ಯ ಇಲಾಖೆ ಇಂಗು ಗುಂಡಿಗಳನ್ನು ತೆಗೆದಿದ್ದರಿಂದ ಇಡೀ ಬೆಟ್ಟ ಕುಸಿದು ಅರ್ಚಕರಾಗಿದ್ದ ನಾರಾಯಣ ಆಚಾರ್ ಅವರ ಕುಟುಂಬವನ್ನೇ ಬಲಿತೆಗೆದುಕೊಂಡಿತು. ಇದೀಗ ರಾಜಾಸೀಟ್ ಕೂಡ ಮುಂದಿನ ಮಳೆಗಾಲದಲ್ಲಿ ಕುಸಿದು ಬಿದ್ದರೆ ಆಶ್ಚರ್ಯ ಪಡುವ ಅಗತ್ಯವಿಲ್ಲ.

ಇನ್ನು ಇಟಾಚಿಗಳನ್ನು ಬಳಸಿ ಬೆಟ್ಟ ಕೊರೆಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಭೇಟಿ ನೀಡಿದ ಎಂಎಲ್‌ಸಿ ವೀಣಾ ಅಚ್ಚಯ್ಯ, ಹಿರಿಯ ರಾಜಕಾರಣಿ ಎಂ.ಸಿ.ನಾಣಯ್ಯ ಅವರು ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಅಭಿವೃದ್ಧಿ ಮಾಡುವ ನೆಪದಲ್ಲಿ ಕೋಟಿ ಕೋಟಿ ಅವ್ಯವಹಾರ ಆಗಿರುವ ಅನುಮಾನವಿದೆ. ಜೊತೆಗೆ ಮುಂದಿನ ಮಳೆಗಾಲದಲ್ಲಿ ಬೆಟ್ಟವೇನಾದರೂ ಕುಸಿದಿದ್ದೇ ಆದಲ್ಲಿ ಅದಕ್ಕೆ ಅಧಿಕಾರಿಗಳೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details