ಕೊಡಗು: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಭಾಗಮಂಡಲ. ಈ ಸೇತುವೆ ಕೊಡಗಿನ ಕುಲದೇವತೆ ಮೂಲ ಸ್ಥಾನ ತಲಕಾವೇರಿಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತೆ. ಅಷ್ಟೇ ಯಾಕೆ ಇಲ್ಲಿಂದ ವಿರಾಜಪೇಟೆ, ಚೇರಂಗಾಲ, ಕೋರಂಗಾಲ ಮತ್ತು ನಾಪೋಕ್ಲು ಸೇರಿದಂತೆ ಹಲವು ಪಟ್ಟಣ ಮತ್ತು ಹಳ್ಳಿಗಳಿಗೆ ಸಂಪರ್ಕ ಸೇತುವೆಯಾಗಿದೆ. ಇಲ್ಲಿನ ಜನರ ಅನುಕೂಲಕ್ಕಾಗಿ ಆರಂಭವಾಗಿರುವ ತ್ರಿವೇಣಿ ಸಂಗಮದ ಮೇಲ್ಸೇತುವೆ ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ.
ಮುಗಿಯದ ಭಾಗಮಂಡಲ ಮೇಲ್ಸೇತುವೆ ಕಾಮಗಾರಿ: ಮುಂದುವರೆದ ಸ್ಥಳೀಯರ ಅಸಮಾಧಾನ ಕಾಂಗ್ರೆಸ್ ನೇತೃತ್ವದ ಸರ್ಕಾರ 3 ವರ್ಷಗಳ ಹಿಂದೆ 30 ಕೋಟಿ ವೆಚ್ಚದಲ್ಲಿ ತ್ರಿವೇಣಿ ಸಂಗಮಕ್ಕೆ ಮೇಲ್ಸೇತುವೆ ನಿರ್ಮಿಸುವುದಕ್ಕೆ ಅನುದಾನ ಬಿಡುಗಡೆ ಮಾಡಿತ್ತು. ವರ್ಷದ ಹಿಂದೆಯೇ ಕಾಮಗಾರಿಯೂ ಆರಂಭವಾಯಿತು. ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಇಂದಿಗೂ ಸೇತುವೆ ಕೆಲಸ ಮಾತ್ರ ಪೂರ್ಣವಾಗಿಲ್ಲ. ಕೇವಲ ಪಿಲ್ಲರ್‌ಗಳನ್ನು ಮಾಡಿದ್ದು ಬಿಟ್ಟರೆ ಇದುವರೆಗೆ ಯಾವುದೇ ಕಾಮಗಾರಿ ಆಗಿಲ್ಲ. ಹೀಗೆ ಹಿಂದೆ ಉಳಿಯೋದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಅನ್ನೋದು ಸ್ಥಳೀಯರ ಆರೋಪ.
ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಮೇಲ್ಸೇತುವೆ ಕಾಮಗಾರಿಗಾಗಿ 30 ಕೋಟಿ ರೂ. ಅನುದಾನ ಕೊಡಿಸಿದ್ದರು. 2 ವರ್ಷಗಳಾದರೂ ಕಾಮಗಾರಿ ನಡೆಯುತ್ತಿಲ್ಲ. ಇದೀಗ ಮತ್ತೆ 8 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಕುಂಟುತ್ತಾ ಸಾಗಿದ್ದ ಕಾಮಗಾರಿ ಕೊನೆಗೂ ಜೂನ್ ಒಳಗೆ ಮುಗಿದು ಜನರ ಬಳಕೆಗೆ ಸೇತುವೆ ಸಿಗುವ ಆಶಯವಿತ್ತು. ಆದರೆ ಲಾಕ್ಡೌನ್ ಇದಕ್ಕೆ ಅಡ್ಡಿಯಾಯಿತು.
ಕೋವಿಡ್ ಲಾಕ್‌ಡೌನ್‌ನಿಂದಾಗಿ ಕೆಲಸ ಮಾಡುತ್ತಿದ್ದ ಅಸ್ಸೋಂ ಮೂಲದ ಕಾರ್ಮಿಕರೆಲ್ಲರೂ ಊರಿಗೆ ವಾಪಸ್ ಹೋಗಿದ್ದಾರೆ. ಕಾರ್ಮಿಕರಿಲ್ಲದೆ ಕಾಮಗಾರಿ ಸಂಪೂರ್ಣ ಸ್ಥಗಿತವಾಗಿದೆ. ಇದರಿಂದಾಗಿ ಈ ಬಾರಿಯೂ ಭಾಗಮಂಡಲದ ಸುತ್ತಮುತ್ತಲಿನ ಹಳ್ಳಿಗಳಿಗೆ ಸಂಪರ್ಕ ಕಡಿತವಾಗೋದು ಖಚಿತವಾಗಿದೆ. ಮಳೆಗಾಲ ಬಂತೆಂದರೆ ಭಾಗಮಂಡಲದ ಸುತ್ತಮುತ್ತಲಿನ ಗ್ರಾಮಗಳು ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಈ ಬಾರಿಯೂ ಸಂಕಷ್ಟ ಎದುರಿಸುವ ಅನಿವಾರ್ಯತೆ ಇದೆ ಎನ್ನಲಾಗಿದೆ.