ಮಡಿಕೇರಿ :ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆಗೆ ಸೇರಿದ ಕಟ್ಟಡದ ಅಕ್ಕಪಕ್ಕದಲ್ಲಿ ಯಾವುದೇ ನೂತನ ಕಾಮಗಾರಿಯನ್ನು ಕೈಗೊಳ್ಳುವಂತಿಲ್ಲ.
ಆದರೆ, ಮಡಿಕೇರಿಯಲ್ಲಿ ನಗರಸಭೆಯ ಮಾಜಿ ಅಧ್ಯಕ್ಷರೊಬ್ಬರು ಕಟ್ಟಡವೊಂದರ ಕಾಮಗಾರಿ ನಡೆಸುತ್ತಿದ್ದರು. ಇದೀಗ ಉನ್ನತ ನ್ಯಾಯಾಲಯದ ಆದೇಶದ ಮೇರೆಗೆ ನಗರಸಭೆ ಕಟ್ಟಡವನ್ನು ತೆರವು ಮಾಡುತ್ತಿದೆ.
ನಗರಸಭೆಯ ಮಾಜಿ ಅಧ್ಯಕ್ಷರೊಬ್ಬರು ರಾಜರಕೋಟೆ ಆವರಣದಿಂದ ಕೇವಲ 40 ಮೀಟರ್ ದೂರದಲ್ಲಿ ಕಳೆದ ಆರು ವರ್ಷಗಳ ಹಿಂದೆ ಕಟ್ಟಡ ಕಾಮಗಾರಿಯೊಂದನ್ನು ಆರಂಭಿಸಿದ್ದರು. ಇದು ನಗರಸಭೆಯ ಇಬ್ಬರು ಮಾಜಿ ಅಧ್ಯಕ್ಷರುಗಳ ನಡುವೆ ಜಟಾಪಟಿಗೂ ಕಾರಣವಾಗಿತ್ತು.
ಈ ಬಗ್ಗೆ ನಗರಸಭೆಯ ಮತ್ತೊಬ್ಬರು ಮಾಜಿ ಅಧ್ಯಕ್ಷರಾದ ಪಿ ಡಿ ಪೊನ್ನಪ್ಪ ಅವರು ನ್ಯಾಯಾಲಯದ ಕದ ತಟ್ಟಿದ್ದರು. ಇದೀಗ ನ್ಯಾಯಾಲಯ ಕಟ್ಟಡ ತೆರವು ಮಾಡಲು ಆದೇಶ ನೀಡಿದ ಹಿನ್ನೆಲೆಯಲ್ಲಿ ನಗರಸಭೆ ಇಂದು ಕಾರ್ಯಾಚರಣೆ ಆರಂಭಿಸಿದೆ. ನಗರದ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಈ ಕಟ್ಟಡವನ್ನು ಸಂಪೂರ್ಣ ತೆರವು ಮಾಡಲಾಗುತ್ತಿದೆ.