ಕೊಡಗು:ನೋಡಲು ಬಂದವರನ್ನು ನುಂಗಲು ಹವಣಿಸುವಂತಿರೋ ಅನಕೊಂಡ, ಬಾನೆತ್ತರಕ್ಕೆ ತಲೆಎತ್ತಿ ನಿಂತಿರುವ ಜಿರಾಫೆ, ಡೈನೋಸರ್ ಪ್ರಕೃತಿ ಸೌಂದರ್ಯಕ್ಕೆ ಮನಸೋತು ನಿಂತಿರುವ ನವಿಲು.. ಹೀಗೆ ನೋಡುತ್ತಾ ನಿಂತರೆ ಸಮಯ ಕಳೆಯುವುದೇ ಗೊತ್ತಾಗಲ್ಲ!
ಕೊಡಗು ಜಿಲ್ಲೆಯ ಸುಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ರಾಜಾಸೀಟ್ನಲ್ಲಿ ಇಂತಹ ದೃಶ್ಯಗಳು ಪ್ರಾವಾಸಿಗರನ್ನು ಮನರಂಜಿಸುತ್ತಿವೆ. ಉದ್ಯಾನಕ್ಕೆ ಮೊದಲು ಕಾಲಿಟ್ಟಾಗ ಬೃಹತ್ ಅನಕೊಂಡ, ಡೈನೋಸರ್, ಆನೆ, ನವಿಲು, ಜಿಂಕೆಗಳು ಹಾಗೂ ಘೆಂಢಾಮೃಗ ಸೇರಿದಂತೆ ಇನ್ನಿತರೆ ಕಲಾಕೃತಿಗಳ ಮಾದರಿಗಳು ಸ್ವಾಗತ ಕೋರುವುದು ವಿಶೇಷ.
ರಾಜಾಸೀಟ್ ಉದ್ಯಾನದಲ್ಲಿ ಹೊಸ ಬದಲಾವಣೆಗಳು ರಾಜಾಸೀಟ್ನಲ್ಲಿ ನಿಂತು ಪ್ರಕೃತಿಯ ಸೌಂದರ್ಯ ಅನುಭವಿಸುವ ಪ್ರವಾಸಿಗರಿಗೆ ಈ ಬಾರಿ ಹೊಸ ಪ್ರಾಣಿಗಳ ಮಾದರಿ ನಿರ್ಮಿಸಿರುವುದು ಸಂತಸ ತಂದಿದೆ. ಅದರಲ್ಲೂ ವಾರಾಂತ್ಯದಲ್ಲಿ ಕುಟುಂಬದ ಜೊತೆ ಕಾಲ ಕಳೆಯಲು ಆಗಮಿಸುವ ಪುಟಾಣಿ ಮಕ್ಕಳು ಸೇರಿದಂತೆ ಯುವಕ-ಯುವತಿಯರು ಕಲಾಕೃತಿಗಳ ಮುಂದೆ ನಿಂತು ವಿವಿಧ ಭಂಗಿಯಲ್ಲಿ ಫೊಟೊ ಕ್ಲಿಕ್ಕಿಸಿಕೊಳ್ಳುತ್ತಾ ಸಂತಸ ಅನುಭವಿಸುತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಬಾರಿ ಸುರಿದ ಮಹಾಮಳೆ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂದು ಆಲೋಚಿಸಿರುವ ಜಿಲ್ಲಾಡಳಿತ, ವಿನೂತನ ಪ್ರಯತ್ನಗಳನ್ನು ಮಾಡುತ್ತಿದೆ. ಸಾವಿರಾರು ರೂ. ವೆಚ್ಚದಲ್ಲಿ ನೈಜ ಪ್ರಾಣಿಗಳೇ ನಾಚುವಂತೆ ಹಲವು ವೈವಿಧ್ಯಮಯ ಕಲಾಕೃತಿಗಳನ್ನು ನಿರ್ಮಿಸಿದೆ. ಈ ಮೂಲಕ ಮಂಜಿನ ನಗರಿ ಮಡಿಕೇರಿಯಲ್ಲಿ ಪ್ರವಾಸೋದ್ಯಮಕ್ಕೆ ಮುಕ್ತವಾಗಿದೆ ಎನ್ನುತ್ತಿದೆ.
ರಾಜಾಸೀಟ್ ಉದ್ಯಾನದಲ್ಲಿ ಇದೀಗ ಹೊಸ ಅತಿಥಿಗಳು ಬರೀ ಹೂ, ಗಿಡ ಹಾಗೂ ಪ್ರಕೃತಿಯ ಸೌಂದರ್ಯ ಅನುಭವಿಸುತ್ತಿದ್ದ ಪ್ರವಾಸಿಗರಿಗೆ ರಾಜಾಸೀಟ್ನಲ್ಲಿ ಈ ಬಾರಿ ಒಂದಿಷ್ಟು ಬದಲಾವಣೆಗಳನ್ನು ಮಾಡಿ ಸೌಂದರ್ಯ ಇಮ್ಮಡಿಗೊಳಿಸಿರುವುದಂತೂ ಸುಳ್ಳಲ್ಲ.