ಮಡಿಕೇರಿ: ಮುಂಗಾರು ಪೂರ್ವಕ್ಕೆ ಮೊದಲು ಜಿಲ್ಲೆಯಲ್ಲಿ (2018-19) ಸಂಭವಿಸಿದ ಪ್ರವಾಹದ ಹಿನ್ನೆಲೆ ಜಿಲ್ಲಾಡಳಿತ ಪ್ರಸ್ತುತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ವರ್ಷದಂತೆ ಈ ವರ್ಷವೂ ಸಹ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮೇ ತಿಂಗಳ ಅಂತ್ಯದೊಳಗೆ ಜಿಲ್ಲೆಗೆ ಆಗಮಿಸಲಿದೆ. ಜಿಲ್ಲೆಯ ಎಲ್ಲ ಹೋಬಳಿಗೆ ಒಬ್ಬರಂತೆ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ನಂತರ ಮಾತನಾಡಿ, ಈ ಅಧಿಕಾರಿಗಳು ತಾವು ನಿಯೋಜಿಸಲ್ಪಟ್ಟ ಹೋಬಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಸಭೆ ನಡೆಸಿ, ಈ ಹಿಂದೆ ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳು, ಪ್ರಕೃತಿ ವಿಕೋಪದಂತಹ ಇತ್ಯಾದಿ ಮಾಹಿತಿಗಳನ್ನು ಕ್ರೋಡೀಕರಿಸಿ, ಮುನ್ನೆಚ್ಚರಿಕೆಯಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟ ತಾಲೂಕು ಆಡಳಿತದೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಈಗಾಗಲೇ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಮುಂಗಾರು ಮಳೆ ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪವನ್ನು ಯಶಸ್ವಿಯಾಗಿ ಎದುರಿಸಲು ಬೇಕಾದ ಬೋಟ್, ಮನಿಲಾ ರೋಪ್, ಆಕ್ಸೆಲ್, ಸರ್ಚ್ ಲೈಟ್, ಛತ್ರಿ, ಗಂಬೂಟು, ರೈನ್ ಕೋಟ್, ಲೈಫ್ ಜಾಕೆಟ್ ಇತ್ಯಾದಿ ಸಾಮಗ್ರಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲಾಗಿದೆ. ಅಗತ್ಯವಿರುವ ಸಾಮಗ್ರಿಗಳಿಗಾಗಿ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಗುತ್ತಿಗೆದಾರರು ಮೇ ಅಂತ್ಯದೊಳಗೆ ಸಾಮಗ್ರಿಗಳನ್ನು ಪೂರೈಸಲಿದ್ದಾರೆ ಎಂದರು.