ಕೊಡಗು: ಜಿಲ್ಲೆಯಲ್ಲಿ ಮಳೆ ಆರಂಭವಾಗುತ್ತಿರುವ ಹಿನ್ನೆಲೆ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪವನ್ನು ಎದುರಿಸುವ ನಿಟ್ಟಿನಲ್ಲಿ ಎನ್ಡಿಆರ್ಎಫ್ ತಂಡ ಜಿಲ್ಲೆಗೆ ಆಗಮಿಸಿದೆ. ಮುಂಜಾನೆ ಕೊಂಚ ಬಿಡುವು ನೀಡಿದ್ದ ಮಳೆರಾಯ ಮತ್ತೆ ಆರ್ಭಟಿಸುತ್ತಿದ್ದಾನೆ.
ತೌಕ್ತೆ ಚಂಡಮಾರುತದ ಪರಿಣಾಮ ಭಾರಿ ಗಾಳಿ ಸಹಿತ ಮಳೆ ಆರಂಭವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಮಳೆ ಹಿನ್ನೆಲೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ 10ನೇ ಬೆಟಾಲಿಯನ್ ಟೀಂ ಕಮಾಂಡರ್ ಬಲ್ಲು ಬಿಸ್ವಾಸ್ ಅವರನ್ನು ಒಳಗೊಂಡ 20 ಮಂದಿ ಎನ್ಡಿಆರ್ಎಫ್ ತಂಡ ಜಿಲ್ಲೆಗೆ ಆಗಮಿಸಿದೆ. ತಲಕಾವೇರಿ, ಭಾಗಮಂಡಲ, ನಾಪೋಕ್ಲು ಸೋಮವಾರಪೇಟೆ ಭಾಗದಲ್ಲಿ ಮಳೆ ಜೋರಾಗಿದೆ. ಕಾವೇರಿ ನೀರಿನ ಮಟ್ಟ ಏರಿಕೆಯಾಗಿದ್ದು, ಉಪನದಿಗಳು, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ನಾಪೋಕ್ಲು ಸಮೀಪದ ಬಲಮುರಿಯಲ್ಲಿ ಸೇತುವೆಯ ಸಮಕ್ಕೆ ನೀರು ಹರಿಯುತ್ತಿದೆ. ಸೇತುವೆ ಮುಳುಗುವ ಹಂತದಲ್ಲಿದ್ದು, ಜನಸಂಚಾರ ಕಷ್ಟಕರವಾಗಿದೆ.