ಕೊಡಗು:ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಮಡಿಕೇರಿ ತಾಲೂಕಿನ ನಾಪೋಕ್ಲುವಿನಲ್ಲಿ ಕಾವೇರಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರಿಂದ ನಾಪೋಕ್ಲು ಪಟ್ಟಣಕ್ಕೆ ತೆರಳುವ ಎಲ್ಲಾ ರಸ್ತೆಗಳು ನೀರಿನಿಂದ ಆವೃತಗೊಂದಿದ್ದು, ಪಟ್ಟಣ ದ್ವೀಪವಾಗುವ ಸಾಧ್ಯತೆಯಿದೆ.
ಈಗಾಗಲೇ ನಾಪೋಕ್ಲು ಬೆಟ್ಟಗೇರಿ ಮಡಿಕೇರಿ ಸಂಪರ್ಕ ಕಲ್ಪಿಸುವ ರಸ್ತೆ, ಕೊಟ್ಟಮುಡಿ ಜಂಕ್ಷನ್ ಬಳಿಯ ಕಾಫಿ ತೋಟಗಳಿಗೆ ಕಾವೇರಿ ನೀರಿನ ಪ್ರವಾಹ ತಲುಪಿದೆ. ಕೇವಲ 5 ರಿಂದ 6 ಅಡಿಗಳಷ್ಟು ನೀರು ಏರಿಕೆಯಾದರೆ ಸಂಪೂರ್ಣ ರಸ್ತೆ ಜಲಾವೃತಗೊಂಡು ಸಂಪರ್ಕ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ನಿರಂತರ ಮಳೆಯಿಂದ ವ್ಯಾಪ್ತಿಯಲ್ಲಿ ಪ್ರವಾಹದ ಲಕ್ಷಣಗಳು ಹೆಚ್ಚಾಗಿದ್ದು, ನದಿ ದಡದಲ್ಲಿ ವಾಸಿಸುವ ಕುಟುಂಬಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಸಮೀಪದ ಚೆರಿಯಪರಂಬು, ಕಾವೇರಿ ನದಿ ದಡದ ಪೈಸಾರಿಯಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತಿದ್ದು, ಆತಂಕದಲ್ಲಿಯೇ ಕಾಲಕಳೆಯುತ್ತಿದ್ದಾರೆ. ಒಂದು ತಿಂಗಳ ಹಿಂದೆಯೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪ್ರವಾಹ ಬರುವ ಸ್ಥಳವಾದ್ದರಿಂದ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ನೋಟಿಸ್ ನೀಡಿ, ಪ್ರವಾಹ ಬರುವ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದ್ದಾರೆ.