ಕೊಡಗು: ಕಾಲಾವಕಾಶ ತೆಗೆದುಕೊಂಡು ಪೋಷಕರು ಹಾಗೂ ಶಿಕ್ಷಕ ಸಮುದಾಯವನ್ನು ಕೊರೊನಾ ಟೆಸ್ಟ್ ತಪಾಸಣೆ ಬಳಿಕ ಶಾಲೆ ತೆರೆಯುವ ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.
ಶಾಲೆಗಳನ್ನು ಆದಷ್ಟು ಬೇಗ ತೆರೆಯಬೇಕು ಅಥವಾ ಬೇಡ ಎನ್ನುವ ಭಾವನೆ ಇದೆ. ಈಗಾಗಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಎಲ್ಲರೊಂದಿಗೆ ಶಾಲೆ ತೆರೆಯುವ ಬಗ್ಗೆ ಸಮಾಲೋಚನೆ ಮಾಡಿದ್ದಾರೆ. ದೆಹಲಿಯ ಎನ್‌ಸಿಆರ್ ಭಾಗದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿ ಶಾಲೆಗಳನ್ನು ತೆರೆದಿರುವ ಉದಾಹರಣೆಗಳಿವೆ. ಅದಕ್ಕೂ ಮೊದಲು ಪೂರ್ವ ಸಿದ್ಧತೆಗಳನ್ನು ತೆಗೆದುಕೊಳ್ಳುವುದು ಒಳಿತು ಎಂದರು.
ರಿಪಬ್ಲಿಕ್ ಟಿವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ಅವರನ್ನು ಪೊಲೀಸರು ಬಲವಂತವಾಗಿ ಬಂಧಿಸಿರುವ ಬಗ್ಗೆ ಮಾತನಾಡಿದ ಅವರು, ಉದ್ಧವ್ ಠಾಕ್ರೆ ಒಂದು ರಾಜ್ಯದ ಸಿಎಂ ಆಗಿ, ಪೊಲೀಸ್ ಬಲದಿಂದ ಒಬ್ಬ ಪತ್ರಕರ್ತನನ್ನು ಬಂಧಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮಾಧ್ಯಮಗಳು ಅವುಗಳ ಕರ್ತವ್ಯವನ್ನು ನಿರ್ವಹಿಸುತ್ತಿವೆ. ಮಾಧ್ಯಮಗಳ ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದರು.
ಮಾಧ್ಯಮಗಳು ಒಂದು ವೇಳೆ ಆಧಾರ ರಹಿತ ಆರೋಪ ಮಾಡಿದರೆ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕು. ಈ ಹಿಂದೆ ನಟಿ ಕಂಗನಾ ರಣಾವತ್ ಹೇಳಿದಂತೆ ಇದು ಶಿವಸೇನಾ ಅಲ್ಲ ಸೋನಿಯಾ ಸೇನಾ ಎನ್ನುವಂತಿದೆ. 1975ರಲ್ಲಿ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿದಂತೆ ನಡೆದುಕೊಳ್ಳುತ್ತಿದೆ. ಇದರಲ್ಲಿ ಪೊಲೀಸರು ಆಡಳಿತ ಪಕ್ಷದ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.