ಕೊಡಗು : ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರೆದಿದೆ. ಬೆಟ್ಟ ಗುಡ್ಡಗಳ ಕುಸಿತ ಒಂದೆಡೆಯಾದರೆ, ಇನ್ನೊಂದೆಡೆ ಮುಂಗಾರು ಆರ್ಭಟಕ್ಕೆ ರಸ್ತೆಗಳು ಜಲಾವೃತಗೊಂಡಿದೆ. ಬೆಟ್ಟ ಗುಡ್ಡ ಮತ್ತು ನದಿ ತೀರ ಪ್ರದೇಶದಲ್ಲಿ ವಾಸಮಾಡುವ ಜನರು ದಿನನಿತ್ಯ ಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಆರ್ಭಟಕ್ಕೆ ಕೊಡಗಿನ ಜನರ ಸ್ಥಿತಿ ದುಸ್ತರವಾಗಿದೆ.
ಆತಂಕದಲ್ಲಿ ಬದುಕುತ್ತಿರುವ ಜನರು : ಜಿಲ್ಲೆಯಲ್ಲಿ ಮುಂಗಾರು ಆರ್ಭಟ ಮುಂದುವರೆದಿದ್ದು, ಒಟ್ಟು 7 ಬಾರಿ ಭೂ ಕಂಪನವಾದ ಬೆನ್ನಲ್ಲೇ ಅಲ್ಲಲ್ಲಿ ಬೆಟ್ಟ ಗುಡ್ಡಗಳು ಕುಸಿಯಲಾರಂಭಿಸಿವೆ. ಮಡಿಕೇರಿ ಸಮೀಪದ ಎರಡನೇ ಮೊಣ್ಣಂಗೇರಿಗೆ ತೆರಳುವ ರಸ್ತೆಯಲ್ಲಿ ಬೆಟ್ಟ ಕುಸಿದು ರಸ್ತೆ ಸಂಚಾರಕ್ಕೆ ತಡೆಯುಂಟಾಗಿದ್ದು, ಜನರು ಪರದಾಡುವಂತಾಗಿದೆ. ಬೆಟ್ಟ ಗುಡ್ಡಗಳಲ್ಲಿ ವಾಸಮಾಡುವ ಜನರು ಎಲ್ಲಿ ಏನಾಗುತ್ತೋ, ಯಾವಾಗ ಬೆಟ್ಟಗುಡ್ಡಗಳು ಕುಸಿಯುವುದೋ ಎಂಬ ಜೀವಭಯದಲ್ಲಿ ಬದುಕುವಂತಾಗಿದೆ. ತಲಕಾವೇರಿ, ಭಾಗಮಂಡಲದಲ್ಲಿ ಭಾರಿ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮ ಭರ್ತಿಯಾಗಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಬಗ್ಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರಿ ಮಳೆಗೆ ಜನಜೀವನ ದುಸ್ತರ :ಭೂಕಂಪನ ಉಂಟಾಗಿರುವ ಬ್ರಹ್ಮಗಿರಿ ಬೆಟ್ಟದ ಭಾಗಗಳಲ್ಲಿಯೂ ಎಡಬಿಡದೆ ಮಳೆಯಾಗುತ್ತಿದೆ. ಕಾವೇರಿ ನದಿ ನೀರಿನ ಮಟ್ಟ ಗಣನೀಯ ಏರಿಕೆಯಾಗಿದ್ದು, ಸಂಗಮ ಭರ್ತಿಯಾಗಿ ನಾಪೋಕ್ಲು ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ನಾಪೋಕ್ಲು ಭಾಗಮಂಡಲ ರಸ್ತೆ ಸಂಪರ್ಕ ಕಡಿತವಾಗಿದೆ. ಜೊತೆಗೆ ಹಾರಂಗಿ ಜಲಾಶಯವೂ ಭರ್ತಿಯಾಗಿದ್ದು, ಶನಿವಾರ 1,200 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದ್ದು ನದಿ ತೀರ ಪ್ರದೇಶದ ಜನರು ಮನೆಖಾಲಿ ಮಾಡುವ ಪರಿಸ್ಥಿತಿ ಎದುರಾಗಿದೆ.