ಕೊಡಗು: ನೀರಿನಲ್ಲಿ ಸಿಲುಕಿದ ಜನರು, ಹೇಗಾದ್ರೂ ಮಾಡಿ ನಮ್ಮನ್ನು ಬದುಕಿಸಿ ಎಂಬ ಅಸಹಾಯಕತೆಯ ದನಿ, ಸುದ್ದಿ ತಿಳಿದು ಕೂಡಲೇ ರಕ್ಷಣೆಗೆ ಧಾವಿಸಿರುವ ರಕ್ಷಣಾ ಪಡೆಯ ಸಿಬ್ಬಂದಿ, ನೀರಿನಲ್ಲಿ ಸಿಲುಕಿರುವ ಜನರನ್ನು ರಕ್ಷಿಸಿ ಆ್ಯಂಬುಲೆನ್ಸ್ನಲ್ಲಿ ಕರೆದೊಯ್ಯುತ್ತಿರುವ ಸಿಬ್ಬಂದಿ.. ಈ ದೃಶ್ಯಾವಳಿಗಳು ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಜಿಲ್ಲಾ ಕಚೇರಿ ಮತ್ತು ಹಾರಂಗಿ ಹಿನ್ನೀರಿನಲ್ಲಿ ಕಂಡುಬಂತು.
ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಮಳೆಯಿಂದ ಭೂಕುಸಿತ ಹಾಗೂ ಪ್ರವಾಹ ಉಂಟಾದ ಸಂದರ್ಭದಲ್ಲಿ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಹೀಗೆ ಸಂಕಷ್ಟಕ್ಕೆ ಸಿಲುಕಿ ಜೀವನ್ಮರಣದ ಹೋರಾಟ ನಡೆಸುತ್ತಿರುವ ರಕ್ಷಣೆಗಾಗಿ ಎನ್ಡಿಆರ್ಎಫ್ ಹಾಗು ಅಗ್ನಿಶಾಮಕ ದಳ ಸನ್ನದ್ಧ ವಾಗಿದೆ. ಇಂಥ ಸಂದರ್ಭದಲ್ಲಿ ಜನರು ಭಯಪಡುವ ಅಗತ್ಯ ಇಲ್ಲ ಎಂದು ತೋರಿಸಲು ಜನರ ರಕ್ಷಣಾ ಕಾರ್ಯಾಚರಣೆ ಬಗ್ಗೆ 'ಪ್ರಾತ್ಯಕ್ಷಿಕೆ' ಜಿಲ್ಲಾ ಕಛೇರಿ ಮತ್ತು ಹಾರಂಗಿ ಹಿನ್ನೀರಿನಲ್ಲಿ ನಡೆಸಲಾಯಿತು.
ಕೊಡಗಿನಲ್ಲಿ ರಕ್ಷಣಾ ಕಾರ್ಯ ಬಗ್ಗೆ 'ಪ್ರಾತ್ಯಕ್ಷಿಕೆ' ಕಳೆದ ಬಾರಿ ಕಂಡು ಕೇಳರಿಯದ ಮಳೆಗೆ ಮಡಿಕೇರಿಯ ಸುತ್ತಮುತ್ತಲಿನ ಪ್ರದೇಶಗಳು ಅಕ್ಷರಶಃ ನೀರಿನಲ್ಲಿ ಮುಳುಗಿದ್ದವು. ಕೆಲವೆಡೆ ಪ್ರವಾಹದ ಅಬ್ಬರಕ್ಕೆ ಮನೆ-ಮಠ, ಆಸ್ತಿ ಪಾಸ್ತಿ ಎಲ್ಲವೂ ಕೊಚ್ಚಿ ಹೋಗಿದ್ದವು. ಹಿಂದೆಂದೂ ಕಾಣದ ರೀತಿಯಲ್ಲಿ ಪ್ರಕೃತಿ ಬೀಸಿದ ಚಡಿಯೇಟಿಗೆ ಜನರು ಅಕ್ಷರಸಹ ನಲುಗಿ ಹೋಗಿದ್ರು. ಧುತ್ತನೇ ಎದುರಾದ ಪ್ರಾಕೃತಿಕ ವಿಕೋಪ ಎದುರಿಸಲು ಮೊದ ಮೊದಲಿಗೆ ಜಿಲ್ಲಾಡಳಿತ ಕೂಡ ಹೆಣಗಾಡಿತ್ತು.
ಈ ಹಿನ್ನೆಲೆಯಲ್ಲಿ ಈ ಬಾರಿ ಏನಾದ್ರೂ ಪ್ರಾಕೃತಿಕ ವಿಕೋಪ ಸಂಭವಿಸಿದರೆ, ಭೂ ಕುಸಿತವಾಗಿ ಜನರು ಸಂಕಷ್ಟದಲ್ಲಿ ಸಿಲುಕಿಕೊಂಡರೆ ಯಾವ ರೀತಿ ನಾವು ಸನ್ನದ್ಧವಾಗಿರಬೇಕು ಎಂಬ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಗಮನಹರಿಸಿದೆ. ಅದರ ಭಾಗವೆಂಬಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಅಣಕು ಪ್ರದರ್ಶನವನ್ನ ಎನ್ಡಿಆರ್ಎಫ್ ತಂಡ ಹಾರಂಗಿ ಹಿನ್ನೀರಿನಲ್ಲಿ ಮತ್ತು ಅಗ್ನಿ ಶಾಮಕ ದಳ ಜಿಲ್ಲಾ ಕಛೇರಿ ಕಟ್ಟಡದಲ್ಲಿ ನಡೆಸಿತು.
ಎನ್ಡಿಆರ್ಎಫ್ ತಂಡದಲ್ಲಿ 20 ಮಂದಿ ಸಿಬ್ಬಂದಿಯಿದ್ದು, ಪ್ರಾಕೃತಿಕ ವಿಕೋಪ ಸಂಭವಿಸಿದ್ದಲ್ಲಿ ಅಗತ್ಯ ಕಾರ್ಯಾಚರಣೆ ನಡೆಸಲಿದ್ದಾರೆ. ಹಾಗೆಯೇ ಅಗ್ನಿಶಾಮಕ ಮತ್ತು ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿವೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತಿಳಿಸಿದರು.
ಮಳೆಗಾಲಕ್ಕೂ ಮುನ್ನವೇ ಎನ್ಡಿಆರ್ಎಫ್ ಪಡೆ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿದ್ದು, ಸವಾಲನ್ನ ಎದುರಿಸಲು ಸಿದ್ಧವಾಗಿದೆ. ನೀರಿನಲ್ಲಿ ಮುಳುಗಿದರೆ ಕಾಪಾಡುವ ದೃಶ್ಯ, ಮನೆಯ ಒಳಗಡೆ ಸಿಲುಕಿದ ಜನರ ಬಳಿಗೆ ಹೋಗಿ ಅವರನ್ನ ಸುರಕ್ಷಿತವಾಗಿ ಹೊರಗಡೆ ಕರೆತರುವ ಚಿತ್ರಣ, ಅಪಾಯದ ಸ್ಥಳದಿಂದ ಬಚಾವಾಗಲು ಗುಡ್ಡವನ್ನ ಹಗ್ಗದ ಮೂಲಕ ಏರೋ ಸನ್ನಿವೇಶ. ಈ ರೀತಿಯಾಗಿ ಎಲ್ಲವನ್ನೂ ಕೂಡ ನೈಜತೆಯಿಂದ ಕೂಡಿರುವ ಹಾಗೆ ಅಣಕು ಪ್ರದರ್ಶನ ನಡೆಸಲಾಯಿತು.
ಸಂಕಷ್ಟದಲ್ಲಿ ಸಿಲುಕಿರುವ ಸಂತ್ರಸ್ತರನ್ನು ಕರೆದುಕೊಂಡು ಬಂದು ಬದುಕಿಸಲು ಹೋರಾಟ ಮಾಡುವ ರಕ್ಷಣ ಸಿಬ್ಬಂದಿಗಳ ಕಾರ್ಯಾಚರಣೆ ವಾಸ್ತವಕ್ಕೆ ತೀರಾ ಹತ್ತಿರ ಎಂಬಂತೆ ಭಾಸವಾಗುತ್ತಿತ್ತು. ಹಾಗೆಯೇ ನೀರಿನಲ್ಲಿ ಸಿಲುಕಿ ಜೀವನ್ಮರಣದ ನಡುವೆ ಹೋರಾಡುತ್ತಿರುವ ಸಂತ್ರಸ್ತನನ್ನ ಅಪಾಯದಿಂದ ಪಾರು ಮಾಡುತ್ತಿರುವ ಸನ್ನಿವೇಶ ಕಣ್ಣಿಗೆ ಕಟ್ಟಿದ್ದಂತೆ ನಿರೂಪಿಸಲಾಗಿತ್ತು.
ಎನ್ಡಿಆರ್ಎಫ್ ತಂಡದ ಜತೆ ನಾಗರೀಕ ತುರ್ತು ಸ್ಪಂದನಾ ಪಡೆ, ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಸೇರಿದಂತೆ 150ಕ್ಕೂ ಹೆಚ್ಚು ಸಿಬ್ಬಂದಿ ಈ ಅಣಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳ