ಕೊಡಗು:ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಕಡಿಮೆ ಮಾಡಲು ಶಾಸಕ ಅಪ್ಪಚ್ಚು ರಂಜನ್ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು.
ಮಡಿಕೇರಿ ನಗರದ ನಗರಸಭೆ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಬಗ್ಗೆ ನಗರಸಭೆ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ, ಕಡು ಬಡವರಿಗೆ ಆಹಾರ ಕಿಟ್ ವಿತರಣೆ ಮಾಡುವುದಾಗಿ ಘೋಷಣೆ ಮಾಡಿದರು. ಆಹಾರ ಕಿಟ್‍ನಲ್ಲಿ 10 ಕೆ.ಜಿ.ಅಕ್ಕಿ, ಒಂದು ಕೆ.ಜಿ.ತೊಗರಿ ಬೇಳೆ, ಒಂದು ಲೀಟರ್ ಅಡುಗೆ ಎಣ್ಣೆ, ಅರ್ಧ ಕೆ.ಜಿ. ಸಾಂಬಾರು ಪದಾರ್ಥ ಹಾಗೂ ಉಪ್ಪು ಒಳಗೊಂಡಿರುತ್ತದೆ. ಈ ತಿಂಗಳ ಅಂತ್ಯದೊಳಗೆ ಆಹಾರ ಕಿಟ್ ವಿತರಿಸಲಾಗುವುದು ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದರು.
ಮಡಿಕೇರಿ ನಗರದಲ್ಲಿ ಕೊರೊನಾ ಮುಕ್ತ ವಾರ್ಡ್‍ಗೆ ತಲಾ 2 ಲಕ್ಷ ರೂ.ಯನ್ನು ಶಾಸಕರ ನಿಧಿಯಿಂದ ಅನುದಾನ ನೀಡಲಾಗುವುದು. ಲಾಕ್‍ಡೌನ್ ಪರಿಣಾಮದಿಂದ ಇತ್ತೀಚೆಗೆ ಕೋವಿಡ್ ಸೋಂಕಿತರ ಪಾಸಿಟಿವಿಟಿ ಮತ್ತು ಮರಣ ಪ್ರಮಾಣ ಕಡಿಮೆಯಾಗುತ್ತಿದ್ದು, ಆ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಆ ದಿಸೆಯಲ್ಲಿ ನಗರಸಭೆ ಸದಸ್ಯರು ಸ್ಥಳೀಯರಿಗೆ ಮಾಹಿತಿ ನೀಡಬೇಕು.