ಕೊಡಗು:ಡಿಸೆಂಬರ್ ಅಂತ್ಯದೊಳಗೆ ನಿರಾಶ್ರಿತರಿಗೆ ಮನೆಗಳನ್ನು ಹಸ್ತಾಂತರಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ವಸತಿ ಸಚಿವ ವಿ ಸೋಮಣ್ಣ ಭರವಸೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ.. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಜಿಲ್ಲೆಯ ವಿವಿಧೆಡೆ ನಿರ್ಮಿಸುತ್ತಿರುವ 633 ಮನೆಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿವೆ. ಅಲ್ಲದೆ ಈ ಬಾರಿ ಪ್ರವಾಹಕ್ಕೆ ಒಳಗಾದವರಿಗೆ ಸುರಕ್ಷಿತ ಸ್ಥಳಗಳಲ್ಲಿ ಮನೆಗಳನ್ನು ನಿರ್ಮಿಸಲು ನಿರ್ಧರಿಸಿದ್ದೇವೆ. 20 ದಿನಗಳೊಳಗೆ ನಿರಾಶ್ರಿತರಿಗೆ ಶಾಶ್ವತ ಪರಿಹಾರ ಒದಗಿಸುತ್ತೇವೆ ಎಂದರು.
ಜಿಲ್ಲಾಡಳಿತ ನೆರೆ ಸಂತ್ರಸ್ತರಿಗೆ ಮಾಸಿಕ ಬಾಡಿಗೆ 10 ಸಾವಿರ ರೂ. ಬಾಡಿಗೆ ಪಾವತಿಸುತ್ತಿದೆ. ಮುಂದಿನ ದಿನಗಳಲ್ಲಿ ಪ್ರವಾಹ ಪೀಡಿತರಿಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ನೆರೆ ಸಂತ್ರಸ್ತರಿಗೆ ಸುರಕ್ಷಿತ ಸ್ಥಳಗಳಲ್ಲಿ ಮನೆಗಳನ್ನು ನಿರ್ಮಿಸಲು ಸರ್ಕಾರಿ ಜಾಗವನ್ನೂ ಗುರುತಿಸಿದ್ದೇವೆ. ಇಲ್ಲಿಯ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಸ್ಥಳೀಯ ಜನಪ್ರತಿನಿಧಿಗಳೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಪ್ರಕೃತಿ ಮುನಿಸಿಕೊಂಡರೆ ನಾವೂ ಹೊಣೆಗಾರರಲ್ಲ. ಈಗಾಗಲೇ ನಾಗಾಲೋಟದಲ್ಲಿ ತುರ್ತಾಗಿ ಕೆಲಸಗಳು ಆಗುತ್ತಿವೆ. ಯಡಿಯೂರಪ್ಪ ಅವರು ಸಿಎಂ ಆದ ನಂತರ ಪ್ರಕೃತಿ ವಿಕೋಪಕ್ಕೆ ತುರ್ತು ಪರಿಹಾರ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದರು.ಕೊಡಗಿನ ಇಬ್ಬರೂ ಶಾಸಕರಲ್ಲಿ ಯಾರಿಗಾದರೂ ಮಂತ್ರಿ ಸ್ಥಾನ ಕೊಟ್ಟರೆ ನಾನೂ ಸಂತೋಷ ಪಡುವೆ. ಇಬ್ಬರ ರಾಜಕೀಯ ಅನುಭವದ ಬಗ್ಗೆ ನಮಗಿಂತ ಇಲ್ಲಿನವರಿಗೇ ಚೆನ್ನಾಗಿ ಗೊತ್ತಿದೆ ಎಂದು ಸ್ಥಳೀಯ ಇಬ್ಬರು ಶಾಸಕರುಗಳಿಗೆ ಮಂತ್ರಿಸ್ಥಾನ ಕೊಟ್ಟಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.