ಕೊಡಗು: ಕಳೆದ ಸಾಲಿನಲ್ಲಿ ರೈತರಿಗೆ 15,300 ಕೋಟಿ ರೂ. ಗುರಿ ನಿಗದಿಪಡಿಸಲಾಗಿತ್ತು. ರಾಜ್ಯದ 21 ಡಿಸಿಸಿ ಬ್ಯಾಂಕುಗಳು 16,795 ಕೋಟಿ ರೂ. ಸಾಲ ನೀಡಿವೆ. ರೈತರಿಂದ ಶೇ.95 ರಷ್ಟು ಸಾಲವನ್ನು ವಸೂಲಾತಿ ಮಾಡಿದೆ. ಈ ಸಾಲಿನಲ್ಲಿ 20,810 ಕೋಟಿ ರೂ. ರೈತರಿಗೆ ಸಾಲ ನೀಡಲು ಗುರಿ ಹೊಂದಲಾಗಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಡಿ.ಸಿ.ಸಿ. ಬ್ಯಾಂಕ್ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸಾಲದ ಪ್ರಯೋಜನ ಪಡೆಯುತ್ತಿರುವ ಜಿಲ್ಲೆಯ ಫಲಾನುಭವಿ ರೈತರಿಗೆ ಸಾಂಕೇತಿಕವಾಗಿ ಸಾಲ ವಿತರಣೆ ಮಾಡಲಾಯಿತು. ರಾಜ್ಯ ಸರ್ಕಾರದ ವಿವಿಧ ರಿಯಾಯಿತಿ ಬಡ್ಡಿ ದರದ ಸಾಲ ಯೋಜನೆಗಳನ್ನು ಸಹಕಾರ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಿದೆ. ರಾಜ್ಯದ 21 ಡಿಸಿಸಿ ಬ್ಯಾಂಕ್‍ಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ಒದಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರ ಸರ್ಕಾರವು ನೂತನವಾಗಿ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಹಕಾರ ಸಚಿವರನ್ನ ರಚನೆ ಮಾಡಿರುವುದರಿಂದ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ನೇರವಾಗಿ ಸಹಕಾರ ಸಚಿವಾಲಯಕ್ಕೆ ವರದಿ ಸಲ್ಲಿಸಬಹುದಾಗಿದೆ ಎಂದು ಸಚಿವರು ತಿಳಿಸಿದರು.