ಕೊಡಗು: ಜಿಲ್ಲೆಯಲ್ಲಿ 2,380 ಕೋವಿಡ್ ಪಾಸಿಟಿವ್ ಆಗಿದ್ದು, ಎಲ್ಲರೂ ಗುಣಮುಖರಾಗಿದ್ದಾರೆ. ಮಕ್ಕಳಲ್ಲಿ ಡೆತ್‌ರೇಟ್ ಕಂಡು ಬಂದಿಲ್ಲ. ಆದರೆ, ಮೂರನೇ ಅಲೆ ಬಗ್ಗೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಓದಿ: COVID update: ರಾಜ್ಯದಲ್ಲಿಂದು 5,783 ಮಂದಿಗೆ ಕೊರೊನಾ, 168 ಸೋಂಕಿತರು ಸಾವು
ನಗರದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 48 ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಸಾವಿರಾರು ಮಕ್ಕಳು ಒಬ್ಬ ಪಾಲಕರನ್ನು ಕಳೆದುಕೊಂಡಿದ್ದಾರೆ. ಹಾಗಾಗಿ ಕಳೆದ 2 ತಿಂಗಳಿಂದ ಈ ಬಗ್ಗೆ ಕಾಳಜಿ ವಹಿಸಲಾಗಿದೆ. ಜಿಲ್ಲೆಯಲ್ಲಿ 35 ಅನಾಥ ಮಕ್ಕಳಿಗೆ ಸರ್ಕಾರದಿಂದ ಧೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ. ಬಾಲಸೇವಾ ಈಗಾಗಲೇ ಘೋಷಿಸಲಾಗಿದ್ದು, ತಿಂಗಳಿಗೆ 3,500 ರೂ. ಹಣ, ಉಚಿತ ಶಿಕ್ಷಣ ಮತ್ತಿತರ ಸೇವೆ ಒದಗಿಸಲಾಗುತ್ತಿದೆ.
ಅಲ್ಲದೆ ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕ 325 ಮಕ್ಕಳಿದ್ದಾರೆ, ಇವರಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ಹಾಗೆಯೇ ಜಿಲ್ಲೆಯಲ್ಲಿ 78 ವಲಸಿಗ ಮಕ್ಕಳಿದ್ದು, ಈ ಮಕ್ಕಳ ಕುಟುಂಬಕ್ಕೆ ಆಹಾರ ಕಿಟ್ ವಿತರಿಸಲಾಗಿದೆ. ಜಿಲ್ಲೆಯಲ್ಲಿ 3,740ಕ್ಕೂ ಹೆಚ್ಚು ವಿಕಲಚೇತನರು ಇದ್ದು, ಇವರಲ್ಲಿ 18 ವರ್ಷ ಮೇಲ್ಪಟ್ಟ 1,464 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ನಾಯಕತ್ವ ಬದಲಾವಣೆ ವಿಚಾರ:
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಸಂಬಂಧಿಸಿದಂತೆ ಹೈಕಮಾಂಡ್ ಸಮರ್ಥವಾಗಿದ್ದು, ಎಲ್ಲವನ್ನೂ ನಿಭಾಯಿಸುತ್ತದೆ. ಒಂದು ಮನೆ ಎಂದ ಮೇಲೆ ವೈಮನಸ್ಸು ಇದ್ದೇ ಇರುತ್ತದೆ, ಅದನ್ನು ಮನೆ ಒಳಗೆ ಬಗೆಹರಿಸಿಕೊಳ್ಳುತ್ತೇವೆ. ಅರುಣ್ ಸಿಂಗ್ ಅವರೊಂದಿಗೆ ಪ್ರತ್ಯೇಕ ಸಭೆ ವಿಚಾರ, ನನ್ನ ಇಲಾಖೆಯ ಕಾರ್ಯವೈಖರಿ ಅಭಿವೃದ್ಧಿ ಕುರಿತು ವರದಿ ನೀಡಿದ್ದೇನೆ. ಬೇರೆ ರಾಜಕೀಯವಾಗಿ ಯಾವುದೇ ವರದಿ ನೀಡಿಲ್ಲ ಎಂದರು.
ಎಂಎಲ್ಸಿ ವಿಶ್ವನಾಥ್ ಸಿಎಂ ವಿರುದ್ಧ ಮಾತನಾಡಿದ ವಿಚಾರ ನಾನು ವಿಶ್ವನಾಥ್ ವಿರುದ್ಧ ಮಾತನಾಡುವಷ್ಟು ದೊಡ್ಡವಳಲ್ಲ. ನಾನು ಅವರ ವಿಷಯವಾಗಿ ಮಾತನಾಡಲ್ಲ ಎಂದು ಮಡಿಕೇರಿಯಲ್ಲಿ ಶಶಿಕಲಾ ಜೊಲ್ಲೆ ಹೇಳಿದರು.