ಕೊಡಗು:ಒಂದು ಗರ್ಭಿಣಿಗೆ ಎಷ್ಟು ಬಾರಿ ಸ್ಕ್ಯಾನ್ ಮಾಡಿಸಬೇಕು, ಜಿಲ್ಲೆಯಲ್ಲಿ ಎಷ್ಟು ಗರ್ಭಿಣಿಯರಿದ್ದಾರೆ, ಎಷ್ಟು ಜನ ಸ್ಕ್ಯಾನ್ ಮಾಡಿಸಿದ್ದಾರೆ ಎಂಬ ಸಾಮಾನ್ಯ ಮಾಹಿತಿ ಇಲ್ಲದೇ ಸಭೆಗೆ ಆಗಮಿಸಿದ ಅಧಿಕಾರಿಗಳಿಗೆ ಕೊಡಗು ಉಸ್ತುವಾರಿ ಸಚಿವ ಬಿಸಿ ನಾಗೇಶ್ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಮಡಿಕೇರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ನಾಗೇಶ್ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯಿತು. ಸಭೆಯಲ್ಲಿ ಯಾವುದೇ ಮಾಹಿತಿ ಇಲ್ಲದೇ ಬಂದು ತಪ್ಪು ಅಂಕಿ - ಅಂಶಗಳನ್ನು ನೀಡುತ್ತಿದ್ದ ಆರೋಗ್ಯ ಅಧಿಕಾರಿಗಳನ್ನು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಆರೋಗ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ನಾಗೇಶ್ ಜಿಲ್ಲೆಯಲ್ಲಿ ಗರ್ಭಿಣಿಯರಿಗೆ ಸಿಗಬೇಕಾದ ಸೌಲಭ್ಯಗಳ ಕುರಿತು ಪರಿಶೀಲನೆ ಮಾಡುವ ವೇಳೆ ಸಚಿವರು ಕೇಳಿದ ಪ್ರಶ್ನೆಗೆ ಅಧಿಕಾರಿಗಳು ಸರಿಯಾಗಿ ಪ್ರತಿಕ್ರಿಯೆ ನೀಡದ್ದಕ್ಕೆ ಜಿಲ್ಲಾ ಹೆಲ್ತ್ ಆಫೀಸರ್, ಸರ್ಜನ್, ಮತ್ತು ಮಹಿಳಾ ಮಕ್ಕಳ ಇಲಾಖೆ ಅಧಿಕಾರಿಗಳ ವಿರುದ್ಧ ಗರಂ ಆದರು. ಗರ್ಭಿಣಿಯರಿಗೆ ಸರಕಾರದಿಂದ ದೊರೆಯುವ ಹಣ ಯಾವ ರೀತಿ ಕೊಡುತ್ತೀರಾ. ಸ್ಕ್ಯಾನ್ ಮಾಡಿಸಿಲ್ಲ ಎಂದರೆ ಸರ್ಕಾರದಿಂದ ಹಣ ಬರುವುದಿಲ್ಲ. ಮತ್ತೆ ಹೇಗೆ ಹಣ ಕೊಡುತ್ತೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಸರ್ಕಾರಕ್ಕೆ ಮತ್ತು ನನಗೆ ಗೌರವ ತರುವುದಿಲ್ಲ:ಯಾವುದೇ ಮಾಹಿತಿ ಇಲ್ಲದೇ ಜನರ ಜೀವನದ ಜೊತೆ ಆಟವಾಡುತ್ತಿದ್ದೀರಾ. ಅಂಗನವಾಡಿ ಕಾರ್ಯಕರ್ತರಿಗೆ ಗೊತ್ತಿರುವ ಮಾಹಿತಿ ನಿಮಗೆ ಇಲ್ಲ. ಒಬ್ಬೊಬ್ಬರು ಒಂದೊಂದು ಉತ್ತರ ಕೊಡುತ್ತೀರಾ. ಸಭೆಗೆ ತಪ್ಪು ಅಂಕಿ - ಅಂಶ ಕೊಡುವುದು ಸರ್ಕಾರಕ್ಕೆ ಮತ್ತು ನನಗೆ ಗೌರವ ತರುವುದಿಲ್ಲ ಎಂದು ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ :ಸಮಸ್ಯೆ ಅರಿಯಲು ಕಚೇರಿ ಗೇಟ್ ಬಳಿ ಕುಳಿತು ಕಾರ್ಯ ನಿರ್ವಹಿಸಿದ ತಹಶೀಲ್ದಾರ್