ಗದಗ:ಜಿಲ್ಲೆಯಲ್ಲಿ ಮಳೆ ಹಾನಿ ಸಮೀಕ್ಷೆಗೆ ಹೊಂಬಳ ಗ್ರಾಮಕ್ಕೆ ಶುಕ್ರವಾರ ತೆರಳಿದ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳು ಸಚಿವರ ಜತೆ ಇರದೇ ಕಾರಿನ ಬಳಿ ಇದ್ದುದನ್ನು ಕಂಡು ಸಚಿವ ಸಚಿವ ಸಿಸಿ ಪಾಟೀಲ ಕೆಂಡಾಮಂಡಲರಾದರು. ಸಚಿವರು ಸಿಟ್ಟಾಗುತ್ತಿದ್ದಂತೆ ಒಡೋಡಿ ಬಂದ ಕೃಷಿ ಅಧಿಕಾರಿಗೆ 'ಆಫೀಸ್ ರೂಂನಲ್ಲಿ ಕುಳಿತು ಬೆಳೆ ಸಮೀಕ್ಷೆ ಮಾಡುವುದಲ್ಲ. ಸೂಕ್ತ ರೀತಿಯಲ್ಲಿ ಸಮೀಕ್ಷೆ ನಡೆಯಬೇಕು ಮತ್ತು ಜನರ ನೋವನ್ನು ತಾಳ್ಮೆಯಿಂದ ಕೇಳಬೇಕು' ಎಂದು ಸೂಚನೆ ನೀಡಿದರು.
ರೈತ ಮಹಿಳೆ ಕಣ್ಣೀರು: "ಏನ್ ಮಾಡ್ಬೇಕು ಹೇಳ್ರಿ. ಹೊಲದ ಮಣ್ಣೆಲ್ಲ ಕೊಚ್ಚಿಕೊಂಡು ಹೋಗೈತ್ರಿ. ಮಣ್ಣು ಎಲ್ಲಿಂದ ತಂದು ಹಾಕಬೇಕ್ರಿ" ಎಂದು ರೈತ ಮಹಿಳೆ ಸುಮಿತ್ರಾ ಎಂಬುವವರು ಸಚಿವರ ಎದುರು ಗಳಗಳನೇ ಕಣ್ಣೀರಿಟ್ಟರು. 8 ಎಕರೆ ಹೊಂದಿರುವ ಸುಮಿತ್ರಾ ಅವರ ಹೊಲ ಹಳ್ಳದ ಪಕ್ಕದಲ್ಲೇ ಇದೆ. ಮಳೆಯಿಂದ ಹಳ್ಳ ಕೋಡಿ ಬಿದ್ದು ಸಂಪೂರ್ಣ ಹೊಲದ ಮಣ್ಣು ಕೊಚ್ಚಿಹೋಗಿದೆ. ಈ ಹಿನ್ನೆಲೆ ರೈತ ಮಹಿಳೆ ಸುಮಿತ್ರಾ ಸಚಿವರ ಬಳಿ ನೋವು ತೋಡಿಕೊಂಡರು. ಮಹಿಳೆಯ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಸಿ.ಸಿ.ಪಾಟೀಲ ಭೇಟಿ ಅಕ್ರಮ ಕಟ್ಟಡ ತೆರವಿಗೆ ಆಗ್ರಹ: ಗ್ರಾಮದ ನೀರು ಹರಿದು ಹಳ್ಳಕ್ಕೆ ಸೇರುವ ಮಾರ್ಗದಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷ ಹುಸೇನ್ ಸಾಬ್ ಹಾದಿಮನಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದರಿಂದ ನೀರು ಮನೆಗಳಿಗೆ ನುಗ್ಗುತ್ತಿದೆ. ಅಕ್ರಮ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಹೊಂಬಳ ಗ್ರಾಮಸ್ಥರು ಸಚಿವ ಸಿ.ಸಿ ಪಾಟೀಲರಿಗೆ ಆಗ್ರಹಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಸಿ.ಸಿ.ಪಾಟೀಲ ಭೇಟಿ ಅಧಿಕಾರಾವಧಿಯಲ್ಲಿ ಹುಸೇನ್ ಸಾಬ್ ಹಾದಿಮನಿ ಅಕ್ರಮ ಕಟ್ಟಡ ನಿರ್ಮಿಸಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಬಿದ್ದ ನೀರು ಹಳ್ಳಕ್ಕೆ ಹರಿದು ಹೋಗದೇ ಮನೆಗಳಿಗೆ ನುಗ್ಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಸ್ಥಳದಲ್ಲೇ ಪಿಡಿಓ ಅವರನ್ನು ಕರೆಸಿದ ಸಚಿವರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ಜನರ ಅಭಿಪ್ರಾಯ ಪಡೆದು ಸೂಕ್ತ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಸಿ.ಸಿ.ಪಾಟೀಲ ಭೇಟಿ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ: ಗದಗ ತಾಲೂಕಿನ ಮದಗಾನೂರು ಹಾಗೂ ಹೊಂಬಳ ಗ್ರಾಮಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಲೋಕೊಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಹ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಮನೆಗಳಿಗೆ ತ್ವರಿತ ಪರಿಹಾರ ದೊರಕಿಸಲು ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದರು. ಮಳೆಯಿಂದಾಗಿ ಹಾನಿಯಾದ ಮನೆಗಳಿಗೆ ಸರ್ಕಾರದ ಮಾರ್ಗಸೂಚಿಗಳನ್ವಯ 10 ದಿನದೊಳಗಾಗಿ ಪರಿಹಾರ ತಲುಪಿಸಬೇಕು ಎಂದರು.
ಅಧಿಕ ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು ಕೂಡಲೇ ಸಂತ್ರಸ್ತರಿಗೆ ಆಹಾರ ಧಾನ್ಯ ವಿತರಿಸಲು ಸೂಚಿಸಲಾಗಿದೆ. ಜಿಲ್ಲೆಯ ನಾಗಾವಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆ ರಾಜ್ಯದಲ್ಲಿಯೇ ಅತಿ ಹೆಚ್ಚು ಮಳೆಯಾದ ವರದಿಯಾಗಿದೆ. ಮಳೆಯಿಂದಾಗಿ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಕೃಷಿ, ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಜೊತೆಗೆ ಅಪಾರ ಪ್ರಮಾಣದ ಮನೆಗಳು, ರಸ್ತೆಗಳು ಹಾಗೂ ಸರ್ಕಾರಿ ಕಟ್ಟಡಗಳು ಹಾನಿಗೊಳಗಾಗಿವೆ. ಅಧಿಕಾರಿಗಳ ತಂಡ ಹಾನಿ ಪ್ರಮಾಣದ ಸಮೀಕ್ಷೆಯನ್ನು ನಿಖರವಾಗಿ ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ನೀಡಲು ತಿಳಿಸಲಾಗಿದೆ ಎಂದರು.
200 ಕೋಟಿ ರೂ. ಅನುದಾನ ಬಿಡುಗಡೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತಿವೃಷ್ಟಿಯಿಂದಾದ ಹಾನಿಗೆ ಪರಿಹಾರ ಒದಗಿಸಲು 200 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಸಂಪುಟ ಸಹೊದ್ಯೋಗಿಗಳು ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದ ಹಿನ್ನೆಲೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಾಗಿದೆ. ರೈತರ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿ ಹಾನಿಯಾಗಿದೆ. ಇದನ್ನು ನರೇಗಾ ಯೋಜನೆಯಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಮಳೆ ನಿಂತ ತಕ್ಷಣ ರಸ್ತೆಗಳ ದುರಸ್ತಿಗೆ ಸೂಚಿಸಲಾಗಿದೆ. ಒಟ್ಟಾರೆ ಜಿಲ್ಲೆಯ ಹಾನಿಯಾದ ಬೆಳೆ, ಮನೆ, ರಸ್ತೆಗಳ ದುರಸ್ತಿಗೆ ಅಧಿಕಾರಿಗಳು ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದು ಸಚಿವ ಸಿ.ಸಿ ಪಾಟೀಲ ಹೇಳಿದರು.
ಇದನ್ನೂ ಓದಿ:ಜಲಪ್ರಳಯದಿಂದ ಹಾನಿ: ಕೊಡಗಿಗೆ ಕೇಂದ್ರ ಅಧ್ಯಯನ ತಂಡ ಭೇಟಿ, ಪರಿಶೀಲನೆ