ಕೊಡಗು: ಮಡಿಕೇರಿ ತಾಲೂಕಿನ ಮದೆನಾಡು ಸಮೀಪದ ಸೀಮೆಹುಲ್ಲು ಕಜೆಗುಡ್ಡ ಕುಸಿದಿರುವ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ಭೇಟಿ ನೀಡಿದ್ದಾರೆ. ಬಿರುಕು ಕಾಣಿಸಿಕೊಂಡ ಗುಡ್ಡಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಇಲ್ಲಿನ ಜನರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ಸಂತ್ರಸ್ತರಿಗೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು. ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಅಭಯ ನೀಡಿದರು. ಈ ಪ್ರದೇಶದಲ್ಲಿ ಮೂರು ಕುಟುಂಬಗಳು ವಾಸವಿದ್ದು, ಸದ್ಯ ಮಳೆಗಾಲ ಮುಗಿಯುವವರೆಗೆ ಸಂಬಂಧಿಕರ ಮನೆಗೆ ತೆರಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.
ಕೊಡಗು : ಭೂ ಕುಸಿತವಾದ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ನಾಗೇಶ್ ಭೇಟಿ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, 2018ರ ಮುಂಗಾರು ಸಂದರ್ಭದಲ್ಲಿ ಇದೇ ವ್ಯಾಪ್ತಿಯಲ್ಲಿ ಭೂಕುಸಿತ ಉಂಟಾಗಿತ್ತು. ಈ ಬಾರಿಯೂ ಇದೇ ಸ್ಥಳದಲ್ಲಿ ಭೂ ಕುಸಿತ ಸಂಭವಿಸಿದೆ. ಆದ್ದರಿಂದ ಮಳೆಗಾಲ ಮುಗಿದ ನಂತರ ತಜ್ಞರ ತಂಡವನ್ನು ಕರೆಸಿ, ವರದಿ ಪಡೆಯಲಾಗುವುದು. 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಇಲ್ಲಿನ ಜನರು ಸಂಕಷ್ಟ ಅನುಭವಿಸಿದ್ದಾರೆ. ಮಳೆಗಾಲದಲ್ಲಿ ಪದೇ ಪದೇ ಭೂಕುಸಿತಕ್ಕೆ ತುತ್ತಾಗುತ್ತಿರುವ ಬಗ್ಗೆ ಮತ್ತೊಂದು ಬಾರಿ ತಜ್ಞರಿಂದ ಅಧ್ಯಯನ ನಡೆಸಲಾಗುವುದು ಎಂದರು.
ನಂತರ ಜೋಡುಪಾಲ ಸಮೀಪದಲ್ಲಿ ಮಳೆ ಹಾನಿಗೆ ತುತ್ತಾದ ಸೇತುವೆಯನ್ನು ಪರಿಶೀಲಿಸಿದ ಸಚಿವರು, ಕೂಡಲೇ ಸೇತುವೆಯನ್ನು ಸರಿಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಓದಿ :ಮಾಲವಿ ಜಲಾಶಯಕ್ಕೆ ಬಂತು ಶಾಶ್ವತ ನೀರು: ಶಾಸಕ ಭೀಮನಾಯ್ಕ ದಂಪತಿಯಿಂದ ಪೂಜೆ ಸಲ್ಲಿಕೆ