ಕೊಡಗು: ಮಡಿಕೇರಿ ದಸರಾ ಹಿಂದಿನಂತೆ ನಡೆಯಲಿದೆ. ಡಿಜೆ ಬಳಕೆಗೆ ಯಾವುದೇ ಸಮಸ್ಯೆ ಆಗಲ್ಲ. ಈ ಕುರಿತು ಈಗಾಗಲೇ ಕಾನೂನು ಸಚಿವರೊಂದಿಗೆ ಮಾತನಾಡಲಾಗಿದೆ. ಸುಪ್ರೀಂ ಕೋರ್ಟ್ನಿಂದ ಅನುಮತಿಗೆ ಪ್ರಯತ್ನಿಸಲಾಗುವುದು ಎಂದು ಉಸ್ತುವಾರಿ ಸಚಿವ ಬಿ ಸಿ ನಾಗೇಶ್ ಹೇಳಿಕೆ ನೀಡಿದರು.
ನಗರದ ಜಿ.ಪಂ.ಸಭಾಂಗಣದಲ್ಲಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ಪಡೆದು ಸಚಿವರು ಮಾತನಾಡಿದರು. ರಾತ್ರಿ 10 ಗಂಟೆ ಬಳಿಕ ಮೈಕ್ ಬಳಸದಂತೆ ಸುಪ್ರೀಂ ಕೋರ್ಟ್ ಆದೇಶ ಹಿನ್ನೆಲೆ ಮಡಿಕೇರಿಯ ದಸರಾ ಜನೋತ್ಸವಕ್ಕೆ ಸಮಸ್ಯೆ ಆಗುವ ಆತಂಕ ಉಂಟಾಗಿತ್ತು. ಮಡಿಕೇರಿ, ಗೋಣಿಕೊಪ್ಪ ದಸರಾಕ್ಕೆ ಹೆಚ್ಚುವರಿ ಅನುದಾನಕ್ಕೆ ಮನವಿ ಹಿನ್ನೆಲೆ ಸಿಎಂ ಅವರ ಬಳಿ ಮಾತನಾಡುತ್ತೇವೆ. ಹೆಚ್ಚುವರಿಯಾಗಿ 40 ಲಕ್ಷ ಕೇಳಿದ್ದಾರೆ. ಅದನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದರು.
ದಸರಾ ಯಶಸ್ಸಿಗೆ ಶ್ರಮಿಸುವಂತೆ ಮನವಿ: ಮಡಿಕೇರಿ ದಸರಾ ಯಾವುದೇ ಸಮಸ್ಯೆಯಿಲ್ಲದೆ ಹಿಂದಿನಂತೆ ನಡೆಯುವುದು. ಮೈಸೂರು ದಸರಾದಷ್ಟೇ ಜನರು ಇಲ್ಲಿಯೂ ಸೇರುತ್ತಾರೆ. ಅದರ ತಯಾರಿಗಾಗಿ ಸಭೆ ಕರೆಯಲಾಗಿತ್ತು. ಎರಡು ವರ್ಷಗಳ ಕಾಲ ಕೋವಿಡ್ ಹಿನ್ನೆಲೆ ಜನ ಇರಲಿಲ್ಲ. ಆದರೆ ಈ ಬಾರಿ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಸಿಎಂ ಜೊತೆಗೆ ಮಾತನಾಡಿ ಅಗತ್ಯತೆಗಳನ್ನು ಪೂರೈಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಮಡಿಕೇರಿ ಮತ್ತು ಗೋಣಿಕೊಪ್ಪ ಜನೋತ್ಸವ ದಸರಾಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಲಿದೆ. ಸಂಪ್ರದಾಯದಂತೆ ದಸರಾ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಿ. ಈ ಹಿಂದಿನಂತೆ ದಸರಾವನ್ನು ಆಚರಿಸುವಂತಾಗಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ವಿವಿಧ ಉಪ ಸಮಿತಿಗಳು ಸೇರಿದಂತೆ ಕಾಲ ಕಾಲಕ್ಕೆ ಸಭೆ ಆಯೋಜಿಸಿ, ದಸರಾ ಯಶಸ್ಸಿಗೆ ಶ್ರಮಿಸುವಂತೆ ಸಚಿವರು ಮನವಿ ಮಾಡಿದರು.
ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಲಿದ್ದು, ದಸರಾವನ್ನು ಸಂಪ್ರದಾಯದಂತೆ ಆಯೋಜಿಸುವಂತಾಗಬೇಕು ಎಂದರು.