ಕರ್ನಾಟಕ

karnataka

ETV Bharat / state

ಕೊಡಗಿನಲ್ಲಿ ಮಾತೃಪೂರ್ಣ ಯೋಜನೆ ಲಕ್ ಬದಲಿಸಿದ ಲಾಕ್​ಡೌನ್ - Matrupurna scheme

ಈ ಹಿಂದೆ ಪ್ರತಿನಿತ್ಯ ಯಾರೂ ಅಂಗನವಾಡಿ ಕೇಂದ್ರಗಳಿಗೆ ಬರುತ್ತಿರಲಿಲ್ಲ. 10 ಜನರಲ್ಲಿ ಒಂದೆರಡು ಜನರು ಬರುವುದು ಕಷ್ಟವಾಗಿತ್ತು. ಆದರೆ ಲಾಕ್‌ಡೌನ್ ಬಳಿಕ ಅಂಗನವಾಡಿ ಕೇಂದ್ರಗಳಲ್ಲಿ ಫುಡ್​ಕಿಟ್ ವಿತರಿಸುತ್ತಿರುವುದರಿಂದ ಸಂಬಂಧಿಕರು ಆಸಕ್ತಿಯಿಂದ ಬಂದು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಇದೇ ಪದ್ಧತಿಯನ್ನು ಮುಂದುವರೆಸುವಂತೆ ಹೇಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾತೃಪೂರ್ಣ ಯೋಜನೆ
ಮಾತೃಪೂರ್ಣ ಯೋಜನೆ

By

Published : Aug 28, 2020, 9:01 PM IST

ಕೊಡಗು:ರಾಜ್ಯ ಸರ್ಕಾರ ಅಪೌಷ್ಟಿಕತೆ ಕೊರತೆಯನ್ನು ‌ನೀಗಿಸಲು ಸಾಕಷ್ಟು ಮಹತ್ವದ ಯೋಜನೆಗಳ ಮೂಲಕ ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಅದರಲ್ಲೂ ಗರ್ಭಿಣಿ ಹಾಗೂ ಬಾಣಂತಿಯರಲ್ಲಿ ಅಪೌಷ್ಟಿಕತೆ ಉಂಟಾಗದಂತೆ ತಡೆಯುವ ಉದ್ದೇಶದಿಂದ ಜಾರಿಗೊಳಿಸಿದ ಮಾತೃಪೂರ್ಣ ಯೋಜನೆ ಜಿಲ್ಲೆಯ ಜತೆಗೆ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಅಷ್ಟೊಂದು ಯಶಸ್ಸು ಕಂಡಿರಲಿಲ್ಲ. ಆದರೆ ಕೊರೊನಾ ಲಾಕ್‌ಡೌನ್ ಘೋಷಿಸಿದ ನಂತರ ಯೋಜನೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ.

ಕೊಡಗಿನಲ್ಲಿ ಮಾತೃಪೂರ್ಣ ಯೋಜನೆ ಲಕ್ ಬದಲಿಸಿದ ಲಾಕ್​ಡೌನ್

ಜಿಲ್ಲೆಯಲ್ಲಿ ಸರ್ಕಾರ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಪೌಷ್ಟಿಕತೆ ಕೊರತೆ ನೀಗಿಸಲು ಜಾರಿಗೆ ತಂದಿರುವ ಮಾತೃಪೂರ್ಣ ಯೋಜನೆಗೆ ಇಷ್ಟು ದಿನಗಳು ಗ್ರಹಣ ಹಿಡಿದಿತ್ತು. ಕಾರಣ ಗರ್ಭಿಣಿ ಹಾಗೂ ಬಾಣಂತಿಯರು ಮಧ್ಯಾಹ್ನ ಅನ್ನ, ಸಾಂಬಾರ್, 200 ಮಿ.ಲೀ ಹಾಲು, ಮೊಟ್ಟೆ ಹಾಗೂ ಕಬ್ಬಿಣ ಅಂಶವಿರುವ ಕಡಲೆ ಚಿಕ್ಕಿ ಇವುಗಳನ್ನು ಸೇವಿಸಲು ಅಂಗನವಾಡಿ ಕೇಂದ್ರಗಳಿಗೆ ಬರಬೇಕಿತ್ತು. ಬೆಟ್ಟ, ಗುಡ್ಡಗಳು ಹಾಗೂ ಕಡಿದಾದ‌ ದಾರಿಗಳು ಕಾರಣ ಅಷ್ಟಾಗಿ ಯಾರೂ ಕೇಂದ್ರಗಳಿಗೆ ಬರುತ್ತಿರಲಿಲ್ಲ. ಆದರೆ ಲಾಕ್‌ಡೌನ್ ಬಳಿಕ ತಿಂಗಳಿಗೆ ಆಗುವಷ್ಟು ಆಹಾರ ಕಿಟ್‌ ಅನ್ನು ಗರ್ಭಿಣಿ ಹಾಗೂ ಬಾಣಂತಿಯರಿಗೆ ಕೊಡಲಾಗುತ್ತಿದೆ‌.‌ ಇದರಿಂದ ಅವರಿಗೆ ಸಂಬಂಧಪಟ್ಟವರು ಫುಡ್‌ಕಿಟ್ ತೆಗೆದುಕೊಂಡು ಹೋಗುತ್ತಿದ್ದಾರೆ. ಹಿಂದೆ ಶೇ.15ರಷ್ಟಿದ್ದ ಯೋಜನೆಯ ಗುರಿ ಪ್ರಸ್ತುತ ಶೇ.100ಕ್ಕೆ ತಲುಪಿದೆ.

ಪೋಷಣ ಅಭಿಯಾನ, ಅಪೌಷ್ಟಿಕತೆ ಕೊರತೆ ನಿವಾರಣೆ ಕುರಿತು ಇಲಾಖೆಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಕಳೆದ ಎರಡು ತಿಂಗಳಿಂದ ಸರ್ಕಾರದ ಆದೇಶದಂತೆ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶವಿರುವ 4ಕೆ.ಜಿ ಅಕ್ಕಿ, 25 ಮೊಟ್ಟೆಗಳು, ಶೇಂಗಾ ಬೀಜ, ಹಾಲಿನಪುಡಿ, ಹೆಸರುಕಾಳು, ಸಕ್ಕರೆ ಹಾಗೂ ಸೋಡಿಯಂ ಅಂಶವಿರುವ ಉಪ್ಪು ಸೇರಿಸಿ ಒಂದು ಫುಡ್‌ಕಿಟ್ ಕೊಡಲಾಗುತ್ತಿದೆ. ಈ ಹಿಂದೆ ಪ್ರತಿನಿತ್ಯ ಯಾರೂ ಅಂಗನವಾಡಿ ಕೇಂದ್ರಗಳಿಗೆ ಬರುತ್ತಿರಲಿಲ್ಲ. 10 ಜನರಲ್ಲಿ ಒಂದೆರಡು ಜನರು ಬರುವುದು ಕಷ್ಟವಾಗಿತ್ತು. ಆದರೆ ಲಾಕ್‌ಡೌನ್ ಬಳಿಕ ಅಂಗನವಾಡಿ ಕೇಂದ್ರಗಳಲ್ಲಿ ಫುಡ್​ಕಿಟ್ ವಿತರಿಸುತ್ತಿರುವುದರಿಂದ ಸಂಬಂಧಿಕರು ಆಸಕ್ತಿಯಿಂದ ಬಂದು ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಇದೇ ಪದ್ಧತಿಯನ್ನು ಮುಂದುವರೆಸುವಂತೆ ಹೇಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕುಂಟುತ್ತ ಸಾಗುತ್ತಿದ್ದ ಮಾತೃಪೂರ್ಣ ಯೋಜನೆ ಕೊರೊನಾ ಪರಿಣಾಮದಿಂದ ವೇಗ ಪಡೆದುಕೊಂಡಿದೆ. ಪ್ರಾಯಾಸದಿಂದ ಅಂಗನವಾಡಿ ಕೇಂದ್ರಗಳಿಗೆ ಹೋಗಿ ಊಟ ಮಾಡಬೇಕಿದ್ದವರಿಗೆ ಕಳೆದೆರಡು ತಿಂಗಳಿಂದ ಸರ್ಕಾರ ರೂಪಿಸಿರುವ ಟೇಕ್ ಹೋಂ ಫುಡ್ ವ್ಯವಸ್ಥೆ ಸಾಕಷ್ಟು ಅನುಕೂಲ ಮಾಡಿರುವುದು ಸುಳ್ಳಲ್ಲ.

ABOUT THE AUTHOR

...view details