ಕೊಡಗು :ಹಣ್ಣುಗಳ ಜಾತಿಯಲ್ಲೇ ಅಗ್ರಸ್ಥಾನ ಹೊಂದಿರುವ ಹಣ್ಣು ಮಾವು. ಅದು ಹಣ್ಣುಗಳ ರಾಜಾ ಅಂತಾನೆ ಫೇಮಸ್. ನೋಡಿದರೆ ತಿನ್ನಬೇಕು ಅನ್ನಿಸುವ ರುಚಿಕರವಾದ ಹಣ್ಣುಗಳ ರಾಜಾ ಮಾವಿನ ಹಣ್ಣಿನ ಮೇಳ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಆರಂಭವಾಗಿದೆ. ಮೊದಲ ಬಾರಿಗೆ ಆಯೋಜನೆಗೊಂಡಿರುವ ಕಾರಣ ಜನರಿಂದಲೂ ಸಖತ್ ರೆಸ್ಪಾನ್ಸ್ ದೊರೆಯುತ್ತಿದೆ.
ನೋಡಿದೊಡನೆ ಬಾಯಲ್ಲಿ ನೀರುರಿಸುವ ಬಗೆ ಬಗೆಯ ಮಾವಿನ ಹಣ್ಣು :10ಕ್ಕೂ ಹೆಚ್ಚು ಬಗೆಯ ಮಾವಿನ ಹಣ್ಣುಗಳ ಪ್ರದರ್ಶನ ನಡೆಯುತ್ತಿದೆ. ಕೊಡಗು ಮಾತ್ರವಲ್ಲದೆ ವಿವಿಧ ಜೆಲ್ಲೆಗಳಿಂದ ವ್ಯಾಪಾರಸ್ಥರು ಆಗಮಿಸಿದ್ದು, ಮಾರಾಟದಲ್ಲಿ ಬ್ಯುಸಿಯಾಗಿದ್ದಾರೆ. ಮಡಿಕೇರಿಯಲ್ಲಿ ನಾಲ್ಕು ದಿನಗಳ ಕಾಲ ಮಾವು ಮೇಳ ನಡೆಯಲಿದೆ. ಕೊಡಗಿನಲ್ಲಿ ಜನ ಮಾವಿನ ಹಣ್ಣಿನ ರುಚಿ ಸವಿಯಲಿದ್ದಾರೆ.
ಮಡಿಕೇರಿಯ ಹಾಪ್ಕಾಮ್ಸ್ ಆವರಣದಲ್ಲಿ ಮೇಳ :ಕೊಡಗು ಜಿಲ್ಲಾ ಹಾಪ್‍ಕಾಮ್ಸ್ ಹಾಗೂ ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯತ್ ವತಿಯಿಂದ ನಾಲ್ಕು ದಿನಗಳ ಕಾಲ ಮಾವು ಮೇಳ ಆಯೋಜಿಸಲಾಗಿದೆ. ಮಡಿಕೇರಿಯ ಹಾಪ್ಕಾಮ್ಸ್ ಆವರಣದಲ್ಲಿ ಸುಮಾರು 18ಕ್ಕೂ ಹೆಚ್ಚಿನ ಮಳಿಗೆಗಳನ್ನು ತೆರೆಯಲಾಗಿದೆ. ಇಂದಿನಿಂದ 6ನೇ ತಾರೀಖಿನವರೆಗೆ ಮೇಳ ನಡೆಯಲಿದೆ. ಕೊಡಗು ಮಾತ್ರವಲ್ಲದೆ, ಮಂಡ್ಯ, ಮೈಸೂರು, ಜಾಮರಾಜನಗರ ಸೇರಿದಂತೆ ನಾನಾ ಭಾಗಗಳ ರೈತರು ತಾವೇ ಬೆಳೆದ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲು ಒಂದು ಸುವರ್ಣ ಅವಕಾಶ ನೀಡಲಾಗಿದೆ.