ಕೊಡಗು: ಕಾಫಿ ತೋಟಕ್ಕೆ ಹೋಗಿ ಬರುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಡಿಕೇರಿ ತಾಲೂಕಿನ ನಾಲಾಡಿ ಗ್ರಾಮದ ಬಳಿ ನಡೆದಿದೆ.
ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಅಸಮಾಧಾನ..! - ಕಾಡಾನೆ ದಾಳಿಯಿಂದ ವ್ಯಕ್ತಿ ಸಾವು ಸುದ್ದಿ
70 ವರ್ಷದ ವೃದ್ಧನ ಮೇಲೆ ಆನೆ ದಾಳಿ ಮಾಡಿದ್ದು, ವೃದ್ಧ ಸಾವನ್ನಪ್ಪಿರುವ ಘಟನೆ ಮಡಿಕೇರಿ ತಾಲೂಕಿನ ನಾಲಾಡಿ ಗ್ರಾಮದ ಬಳಿ ನಡೆದಿದೆ.

ನಾಪೋಕ್ಲು ಹೋಬಳಿಯ ಕಕ್ಕಬ್ಬೆ ಸಮೀಪದ ನಾಲಾಡಿ ಗ್ರಾಮದ ನಿವಾಸಿ ಕುಡಿಯರ ಚಿನ್ನಪ್ಪ (70) ಆನೆ ದಾಳಿಗೆ ಬಲಿಯಾದ ವೃದ್ಧನಾಗಿದ್ದಾರೆ. ಇವರು ತೋಟಕ್ಕೆ ಹೋಗಿ ಮನೆಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಆನೆ ಅಟ್ಟಿಸಿಕೊಂಡು ಬಂದು ಅವರ ಹೊಟ್ಟೆ ಭಾಗಕ್ಕೆ ತುಳಿದಿದೆ ಎನ್ನಲಾಗಿದೆ.
ಇನ್ನು ಬೆಳಗ್ಗೆ ಅದೇ ಗ್ರಾಮದ ನಾಣಿ ಎಂಬುವರು ತೋಟಕ್ಕೆ ಹೋಗಿ ಬರುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ಈಗಾಗಲೇ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಆನೆಗಳನ್ನು ನಿಯಂತ್ರಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಮಾತ್ರ ಜಾಣ ಮೌನ ವಹಿಸಿದ್ದಾರೆ ಎಂದು ಸ್ಥಳೀಯರು ಅಸಮಾಧಾನದ ಜೊತೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.