ಮಡಿಕೇರಿ(ಕೊಡಗು): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಂದೆಯೇ ಮಗನನ್ನು ಗುಂಡಿಕ್ಕಿ ಹತ್ಯೆಗೈದಿರುವ ಭಯಾನಕ ಘಟನೆ ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ನಡೆದಿದೆ. ಪುತ್ರ ನಿರೆನ್ (28)ಅನ್ನು ಹತ್ಯೆ ಮಾಡಿ ತಂದೆ ನಂದೇಟಿರ ಚಿಟ್ಟಿಯಪ್ಪ ಪೊಲೀಸರಿಗೆ ಶರಣಾಗಿದ್ದಾರೆ.
ಒಂದೇ ಮನೆಯಲ್ಲಿ ವಾಸ, ನಿತ್ಯವೂ ನಡೆಯುತ್ತಿತ್ತು ಜಗಳ.. ತಂದೆ ಮತ್ತು ಪುತ್ರ ಇಬ್ಬರು ಕೂಡ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಪುತ್ರ ನಿರೆನ್ ತೋಟ ಮತ್ತು ಮನೆಯ ಕೆಲಸವನ್ನು ಮಾಡಿಕೊಂಡು ಸಂಸಾರವನ್ನು ನಿಭಾಯಿಸಿಕೊಂಡು ಹೋಗುತ್ತಿದ್ದರು. ಆದರೆ ಇಷ್ಟೆಲ್ಲಾ ಕೆಲಸ ಮಾಡಿದರು ಮಗ ಮತ್ತು ಅಪ್ಪನ ನಡುವೆ ಸಣ್ಣ ಪುಟ್ಟ ಗಲಾಟೆಗಳು ನಡೆಯುತ್ತಿದ್ದವು. ಗಲಾಟೆ ತೀವ್ರ ವಿಕೋಪಕ್ಕೆ ತಿರುಗಿದ್ದು, ತಂದೆ ನಂದೇಟಿರ ಚಿಟ್ಟಿಯಪ್ಪ ಅವರು ಮನೆಯಲ್ಲಿದ್ದ ಬಂದೂಕನಿಂದ ಮಗ ನಿರೆನ್ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿ, ನಂತರ ಮಡಿಕೇರಿ ಪೊಲೀಸ್ ಠಾಣೆಗೆ ಬಂದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಶರಣಾಗಿದ್ದಾರೆ ಎಂದು ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಮಡಿಕೇರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ, ಪೊಲೀಸರಿಂದ ಪರಿಶೀಲನೆ.. ಈ ಘಟನೆ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ :ಸೈಟಿನ ಹೆಸರಿನಲ್ಲಿ ಸರ್ಕಾರಿ ನೌಕರನಿಗೆ ವಂಚನೆ: ಹಣ ಕೇಳಿದರೆ ಅತ್ಯಾಚಾರದ ದೂರು ಕೊಡುವುದಾಗಿ ಬೆದರಿಕೆ ಆರೋಪ