ಕೊಡಗು: ಮಡಿಕೇರಿಯ ಜಿಲ್ಲಾ ಕಚೇರಿಗೆ ಕಟ್ಟಿದ್ದ ತಡೆಗೋಡೆ ಕುಸಿಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 275 ಅನ್ನು ಬಂದ್ ಮಾಡಲಾಗಿದೆ. ತಡೆಗೋಡೆ ಕುಸಿಯುತ್ತಿರುವುದರಿಂದ ಕೆಳಭಾಗದಲ್ಲಿ ವಾಸ ಮಾಡುವ ಜನರಿಗೆ ಆತಂಕ ಎದುರಾಗಿದೆ.
2018ರಲ್ಲಿ ಭಾರಿ ಮಳೆಯಾಗಿ ಜಿಲ್ಲಾ ಕಚೇರಿಯ ಕೆಳಭಾಗದ ಮಣ್ಣು ಕುಸಿದಿತ್ತು. ಜಿಲ್ಲಾ ಕಚೇರಿ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಜಾಗ್ರತಾ ಕ್ರಮವಾಗಿ ಜರ್ಮನ್ ಟೆಕ್ನಾಲಜಿ ಬಳಸಿ 7 ಕೋಟಿ ರೂ. ವೆಚ್ಚದಲ್ಲಿ ಮೂರು ಹಂತದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಈಗ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತಡೆಗೋಡೆ ಕೆಳಭಾಗದಲ್ಲಿ ಜೋಡಿಸಿದ್ದ ಕಲ್ಲುಗಳು ಕುಸಿಯುತ್ತಿವೆ.
ತಡೆಗೋಡೆಯ ಒಳಗಡೆ ಇರುವ ನೀರು ಹೊರಹೋಗುವಂತೆ ಪೈಪ್ ಅಳವಡಿಸಲಾಗಿದೆ. ಆದರೂ ಸಹ ಹಂತ-ಹಂತವಾಗಿ ತಡೆಗೋಡೆ ಕುಸಿಯುತ್ತಿದೆ. ತಡೆಗೋಡೆ ಕೆಳಗೆ ಬಿದ್ದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಆಗುವ ಜೊತೆಗೆ ಕೆಳ ಭಾಗದಲ್ಲಿ ವಾಸಮಾಡುವ ಮನೆಗಳು, ಹೋಟೆಲ್ಗಳ ಮೇಲೆ ಮಣ್ಣು ಬಿದ್ದು, ಹೆಚ್ಚಿನ ಅನಾಹುತ ಉಂಟಾಗುವ ಸಾಧ್ಯತೆ ಇದೆ.
ಮಂಗಳೂರು ರಸ್ತೆ ಬಂದ್:ಮಡಿಕೇರಿ ತಿಮ್ಮಯ್ಯ ವೃತ್ತದಲ್ಲಿ ಮಂಗಳೂರು ರಸ್ತೆ ಸಂಚಾರ ಬಂದ್ ಮಾಡಲಾಗಿದೆ. ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ಮಂಗಳೂರು ರಸ್ತೆ ಬಂದ್ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವ ಸ್ಥಿತಿಯಿದೆ. ಮಡಿಕೇರಿ ಮಾರ್ಗವಾಗಿ ಮೇಕೆರಿ ತಾಳತ್ತಮನೆ ಅಪ್ಪಂಗಳ ಮಾರ್ಗ ಬಳಸುವಂತೆ ವಾಹನ ಸವಾರರಿಗೆ ತಿಳಿಸಲಾಗಿದೆ.
ಇದನ್ನೂ ಓದಿ:ನಾಪೋಕ್ಲು-ಮೂರ್ನಾಡು ರಸ್ತೆ ಸಂಪೂರ್ಣ ಜಲಾವೃತ: ಸಂಚಾರ ಸ್ಥಗಿತ