ಕೊಡಗು: ಮಡಿಕೇರಿಯಲ್ಲಿ ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿಗೆ ಚಾಕು ಇರಿದಿರುವ ಘಟನೆ ನಡೆದಿದೆ. ಮಡಿಕೇರಿ ನಗರದ ತ್ಯಾಗರಾಜ ಕಾಲೋನಿ ನಿವಾಸಿ ಹ್ಯಾರಿಸ್ ಚಾಕು ಇರಿತಕ್ಕೊಳಗಾದ ವ್ಯಕ್ತಿ ಎಂದು ತಿಳಿದುಬಂದಿದೆ.
ಘಟನೆ ಹಿನ್ನೆಲೆ : ಜಿಲ್ಲೆಯ ಮಡಿಕೇರಿ ನಗರದ ರಾಣಿಪೇಟೆ ನಿವಾಸಿ ಅಬ್ದುಲ್ ರೆಹಮಾನ್ ಹಾಗೂ ತ್ಯಾಗರಾಜ ಕಾಲೋನಿ ನಿವಾಸಿ ಹ್ಯಾರಿಸ್ ಎಂಬವರ ನಡುವೆ ಕಳೆದ 10 ವರ್ಷಗಳಿಂದ ವೈಯಕ್ತಿಕ ದ್ವೇಷವಿತ್ತು. ಇವರಿಬ್ಬರಿಗೆ ವಾಟ್ಸಾಪ್ ಮೂಲಕ ದಿನಾ ಜಗಳವಾಗುತ್ತಿತ್ತು ಎನ್ನಲಾಗಿದೆ. ಅದೇ ವಿಚಾರವಾಗಿ ಕೋಪಗೊಂಡಿದ್ದ ಹ್ಯಾರಿಸ್, ಕಳೆದ ಡಿ.29 ರಂದು ರಾಣಿಪೇಟೆಯಲ್ಲಿ ನಿಲ್ಲಿಸಲಾಗಿದ್ದ ಅಬ್ದುಲ್ ರೆಹಮಾನ್ ಅವರ ಆಟೋ ರಿಕ್ಷಾಕ್ಕೆ ಬೆಂಕಿ ಹಚ್ಚಿದ್ದ.
ಆಟೋ ಸಮೀಪದಲ್ಲಿ ಆರೋಪಿ ಹ್ಯಾರಿಸ್ ಓಡಾಡುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನಾಧರಿಸಿ ಪೊಲೀಸರು ಹ್ಯಾರಿಸ್‌ನನ್ನು ಡಿ.30 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಆದರೆ ಬಂಧನವಾದ ಒಂದೇ ದಿನದಲ್ಲಿ ಹ್ಯಾರಿಸ್ ಜಾಮೀನು ಪಡೆದು ಹೊರಬಂದಿದ್ದ ಎಂದು ತಿಳಿದುಬಂದಿದೆ.
ಕಳೆದ ಭಾನುವಾರ ಬೆಳಗ್ಗೆ ನಗರದ ಮಹದೇವಪೇಟೆಯ ಬಳಿ ಹ್ಯಾರಿಸ್ ಹಾಗೂ ಅಬ್ದುಲ್ ರೆಹಮಾನ್ ಮುಖಾಮುಖಿಯಾಗಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಹ್ಯಾರಿಸ್ ಕುತ್ತಿಗೆಗೆ ಅಬ್ದುಲ್ ರೆಹಮಾನ್ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವಕ್ಕೊಳಗಾದ ಹ್ಯಾರಿಸ್‌ನನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ನಗರ ಠಾಣಾ ಪೊಲೀಸರು ಆರೋಪಿ ಅಬ್ದುಲ್ ರೆಹಮಾನನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ :ನಳಂದದಲ್ಲಿ ಹಳೇ ದ್ವೇಷಕ್ಕೆ ಐದು ತಿಂಗಳ ಮಗು ಬಲಿ