ಕೊಡಗು: ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಾಜಿ ವಿಶೇಷ ಕಾರ್ಯದರ್ಶಿವೋರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಶಾಲನಗರ ಸಮೀಪದ ಶಿರಂಗಾಲದ ತೊರೆನೂರು ಬಳಿ ನಡೆದಿದೆ.
ಶಿರಂಗಾಲದ ತೊರೆನೂರು ಬಳಿ ಲಾರಿ-ಕಾರ್ ನಡುವೆ ಅಪಘಾತ ಡಾ. ಅಪ್ಪಯ್ಯ (60) ರಸ್ತೆ ಅಪಘಾದಲ್ಲಿ ಸಾವನ್ನಪ್ಪಿದವರು. ಬೆಂಗಳೂರಿನಿಂದ ಕುಶಾಲನಗರಕ್ಕೆ ಹೊರಟಿದ್ದ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆಯೇ ಈ ದುರ್ಘಟನೆಗೆ ಕಾರಣ ಎನ್ನಲಾಗ್ತಿದೆ.
ಡಾ. ಅಪ್ಪಯ್ಯ ಅವರ ಪತ್ನಿ ಮೀನಾ ಅವರು ಕುಶಾಲನಗರದಲ್ಲಿರುವ ತಮ್ಮ ಮಗಳನ್ನು ನೋಡಲು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಕುಶಾಲನಗರದ ಶಿರಂಗಾಲ ಬಳಿಯ ತೊರೆನೂರು ಬಳಿ ಎದುರಿನಿಂದ ಅತಿ ವೇಗವಾಗಿ ಬಂದ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅಪ್ಪಯ್ಯ ಮೃತಪಟ್ಟರೆ ಪತ್ನಿ ಮೀನಾಗೆ ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಾಕ್ಟರ್ ಅಪ್ಪಯ್ಯ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಹಾಗೂ ಯಡಿಯೂರಪ್ಪ ಅವರಿಗೆ ವಿಶೇಷ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಅಪ್ಪಯ್ಯ ಅವರು ಹಾಸನ ನಗರದ ರಾಘವೇಂದ್ರ ಟ್ರೇಡರ್ಸ್ ಮಾಲೀಕರಾದ ಅನಿಲ್ ಕುಮಾರ್ ಮತ್ತು ಮಹೇಶ್ ಅವರ ಸಂಬಂಧಿಗಳಾಗಿದ್ದಾರೆ. ಘಟನೆ ವೇಳೆ ಕಾರಿನಲ್ಲಿದ್ದ ನಾಯಿಯೊಂದು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದು, ಮೃತಪಟ್ಟ ಮಾಲೀಕನ ನೋವಿನಿಂದ ಕೆಲಕಾಲ ರೋದಿಸಿದ್ದು, ಎಂಥವರನ್ನು ಮನಕಲಕುವಂತಿತ್ತು.
ಇನ್ನು ಇದೇ ವೇಳೆ ಹಾಸನದಿಂದ ಕುಶಾಲನಗರಕ್ಕೆ ತೆರಳುತ್ತಿದ್ದ ಸಂಪಾದಕರಾದ ಸುರೇಶ್ ಅವರು ಅಪಘಾತಕ್ಕೊಳಗಾದ ಕುಟುಂಬ ವರ್ಗದವರನ್ನು ತಕ್ಷಣ ತಮ್ಮ ಕಾರಿನಲ್ಲಿ ಕುಶಾಲನಗರಕ್ಕೆ ಕರೆದೊಯ್ದು ಅವರಿಗೆ ಹೆಚ್ಚಿನ ಚಿಕಿತ್ಸೆಯನ್ನು ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಪಘಾತ ಕುರಿತು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.