ಕೊಡಗು: ಪ್ರತಿ ವರ್ಷ ಕೊಡಗಿನಲ್ಲಿ ಉತ್ತಮ ಮಳೆ ಆಗುತ್ತಿತ್ತು. ಆದ್ರೆ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಇನ್ನಾದರು ಉತ್ತಮ ಮಳೆಯಾಗಿ ಜೀವರಾಶಿಗಳಿಗೆ ಒಳಿತಾಗಲಿ ಎಂದು ಮಡಿಕೇರಿ ತಾಲೂಕಿನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಭಗಂಡೇಶ್ವರದ ಅರ್ಚಕರು ಹಾಗೂ ಸ್ಥಳೀಯರು ಶ್ರದ್ಧಾ-ಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.
ತ್ರಿವೇಣಿ ಸಂಗಮದಲ್ಲಿ ಪೊಲಿಂಕಾನ ಪೂಜೆ ಕೊಡಗು ಜಿಲ್ಲೆಯ ಬಾಳೆದಂಡಿನಲ್ಲಿ ಮಂಟಪದ ರೂಪದಲ್ಲಿ ನಿರ್ಮಿಸಿದ್ದ ರಥಕ್ಕೆ ಮುತ್ತೈದೆಯರು ಮಡಿ ತುಂಬುವಂತೆ ಸೀರೆ, ಬಳೆ, ಬಾಚಣಿಗೆ, ತೊಟ್ಟಿಲು, ಕನ್ನಡಿ, ಅರಿಶಿಣ-ಕುಂಕುಮವನ್ನು ದೇವರಿಗೆ ಸಮರ್ಪಿಸಿ ಜೀವ ಸಂಕುಲಗಳಿಗೆ ಒಳಿತು ಮಾಡುವಂತೆ ಹಾಗೂ ಜನ-ಜಾನುವಾರುಗಳು, ಪ್ರವಾಸಿಗರಿಗೆ ಆತಂಕ ಸೃಷ್ಟಿಸದಿರಲಿ ಎಂದು ಶಾಸ್ತ್ರೋಕ್ತವಾಗಿ ಬೇಡಿಕೊಂಡರು.
ಭಗಂಡೇಶ್ವರ ದೇವಾಲಯದ ಅರ್ಚಕ ಹರೀಶ್ ಮಾತನಾಡಿ, ಎಲ್ಲರಿಗೂ ಒಳಿತಾಗಲಿ ಎಂದು ಇಂದು ತ್ರಿವೇಣಿ ಸಂಗಮದಲ್ಲಿ ವಿಶೇಷವಾದ ಪೊಲಿಂಕಾನ ಪೂಜೆ ನೆರವೇರಿಸಿದ್ದೇವೆ. ಅದನ್ನು ತಾಯಿ ಕಾವೇರಿ ಅಮ್ಮ ಒಳ್ಳೆಯ ರೀತಿಯಲ್ಲಿ ಸ್ವೀಕಾರ ಮಾಡಿದ್ದಾಳೆ. ಬರುವ ಯಾತ್ರಾರ್ಥಿಗಳಿಗೆ ತೊಂದರೆ ಆಗಬಾರದು, ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಉತ್ತಮ ಮಳೆ-ಬೆಳೆ ಆಗಲಿ ಎಂದು ಬೇಡಿಕೊಂಡಿದ್ದೇವೆ ಎಂದು ಹೇಳಿದರು.
ಈ ಕ್ಷೇತ್ರದಲ್ಲಿ ಪೊಲಿಂಕಾನ ಒಂದು ವಿಷೇಷ ಪೂಜೆ. ಪ್ರತಿ ವರ್ಷ ರೌದ್ರವತಾರ ಸೃಷ್ಠಿಸದಂತೆ ತಾಯಿ ಕಾವೇರಿಗೆ ಬೇಡಿಕೊಳ್ಳುತ್ತೇವೆ. ಆದರೆ ಈ ವರ್ಷ 9 ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಜನ-ಜಾನುವಾರುಗಳು ಉಳಿಯಬೇಕಾದರೆ ಸಾಕಷ್ಟು ಮಳೆ ಬೀಳಲಿ ಎಂದು ಬೇಡಿಕೊಂಡಿದ್ದೇವೆ. ತೆಪ್ಪ ವಿಸರ್ಜನೆ ಗಮನಿಸಿದರೆ ನಮ್ಮೆಲ್ಲರನ್ನು ತಾಯಿ ಕಾಪಾಡುತ್ತಾಳೆ ಎಂಬ ನಂಬಿಕೆ ಇದೆ ಎಂದು ದೇವಸ್ಥಾನದ ಮುಖ್ಯಸ್ಥ ಮೊಟಯ್ಯ ಹೇಳಿದರು.