ಮಡಿಕೇರಿ(ಕೊಡಗು): ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಸಂಭವಿಸಿದ ಭೀಕರ ಭೂಕುಸಿತ ಮತ್ತು ಪ್ರವಾಹದ ದುರಂತಗಳು ಜಿಲ್ಲೆಯ ಜನರ ಕಣ್ಮುಂದೆ ಇವೆ. ಅದಾಗಲೇ ಜಿಲ್ಲೆಯಲ್ಲಿ ಮತ್ತೊಂದು ದುರಂತದ ಲಕ್ಷಣ ಎದುರಾಗಿದೆ.
ಮಡಿಕೇರಿಯಲ್ಲಿ ಅಲ್ಪ ಪ್ರಮಾಣದ ಭೂಕುಸಿತ; ಸ್ಥಳಕ್ಕೆ ಅಧಿಕಾರಿಗಳ ದೌಡು ಕೊಡಗು ಎಂದರೆ ಮೂರು ತಿಂಗಳು ಮಳೆರಾಯ ಎಡಬಿಡದೆ ಸುರಿಯೋದು ಸಾಮಾನ್ಯ. ಆದರೆ ಒಂದು ವಾರದಲ್ಲಿ ಮೂರ್ನಾಲ್ಕು ದಿನದಿಂದ ಸಂಜೆ ವೇಳೆ ಸುರಿದ ಮಳೆಗೆ ಮಡಿಕೇರಿಯಲ್ಲಿ ಅಲ್ಪ ಪ್ರಮಾಣದ ಭೂ ಕುಸಿತ ಉಂಟಾಗಿದೆ. ಚಾಮುಂಡೇಶ್ವರಿ ನಗರದ ಶ್ಯಾಮ್ ಎಂಬುವರ ಮನೆಯ ಬಳಿ ಸ್ವಲ್ಪ ಪ್ರಮಾಣದ ಭೂ ಕುಸಿತವಾಗಿದೆ. ಇದು ಸುತ್ತಮುತ್ತಲ ಹಲವು ಕುಟುಂಬಗಳ ಆತಂಕಕ್ಕೆ ಕಾರಣವಾಗಿದೆ.
ನಿನ್ನೆ ಸಂಜೆ ಭೂ ಕುಸಿತವಾಗುತ್ತಿದ್ದಂತೆ ಜನರು ಭಯಗೊಂಡು ಜಿಲ್ಲಾ ಸಹಾಯವಾಣಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು, ಎನ್‍ಡಿಆರ್‌ಎಫ್ ತಂಡ ಸೇರಿದಂತೆ ನೋಡಲ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಕ್ಷಣವೇ ಸ್ಪಂದಿಸಿರುವ ಅಧಿಕಾರಿಗಳು 5 ಕುಟುಂಬಗಳನ್ನು ಸ್ಥಳಾಂತರ ಮಾಡಿದ್ದಾರೆ. ಆದರೆ ಇನ್ನೂ ಕೂಡ ಕೆಲವು ಮನೆಗಳಿಗೆ ಇದರಿಂದ ಆತಂಕ ಎದುರಾಗಿದ್ದು, ಮನೆಗಳಿಂದ ನಮ್ಮನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
ಇಂದು ಬೆಳಗ್ಗೆಯೂ ಸಹ ಸ್ಥಳಕ್ಕೆ ಉಪವಿಭಾಗ ಅಧಿಕಾರಿ ಜವರೇಗೌಡ, ನಗರ ನೋಡೆಲ್ ಅಧಿಕಾರಿ ಅರುಂಧತಿ ಸೇರಿದಂತೆ ಮಡಿಕೇರಿ ನಗರ ಸಭೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಭಾಗ್ಯ ಅವರ ಮನೆ ಮತ್ತು ಎದುರಿನ ಮನೆಗಳು ತೀವ್ರ ಅಪಾಯದಲ್ಲಿ ಇರುವುದರಿಂದ ಎರಡು ಮನೆಗಳನ್ನು ಶಾಶ್ವತವಾಗಿ ಸ್ಥಳಾಂತರ ಮಾಡಲಾಗುವುದು ಎಂದು ಉಪವಿಭಾಗಾಧಿಕಾರಿ ಜವರೇಗೌಡ್ರು ಹೇಳಿದ್ದಾರೆ.
ಕೊಡಗಿನಲ್ಲಿ ಎರಡು ವರ್ಷಗಳಿಂದ ಎದುರಾಗಿರುವ ಪ್ರಾಕೃತಿಕ ವಿಕೋಪ ಜನರನ್ನು ಆತಂಕದಲ್ಲೇ ಇರಿಸಿದೆ. ಈ ನಡುವೆ ಸಣ್ಣ ಮಳೆಗೆ ಮಡಿಕೇರಿ ನಗರದಲ್ಲಿ ಭೂ ಕುಸಿತವಾಗಿರುವುದು ಜನರನ್ನು ಮತ್ತಷ್ಟು ಆತಂಕ ಎದುರಾಗುವಂತೆ ಮಾಡಿರುವುದಂತೂ ಸತ್ಯ.