ಕೊಡಗು : ಜಿಲ್ಲೆಯ ಮದೆನಾಡಿನ ಹುಲುಕಜೆ ಬೆಟ್ಟದಲ್ಲಿ ಜಲಸ್ಫೋಟಗೊಂಡಿರೊದು ಎಲ್ಲರಿಗೂ ತಿಳಿದ ವಿಚಾರ. ಹೀಗಾಗಿ, ಈ ಭಾಗದ ಜನತೆ ಬಹಳ ಆತಂಕದಲ್ಲಿದ್ದಾರೆ. ಆದರೆ ಕೆಲವೊಂದು ರಿಯಲ್ ಎಸ್ಟೇಟ್ ಮಾಫಿಯಾಗಳು ಮಾತ್ರ ತಮ್ಮ ಲಾಭಕ್ಕೋಸ್ಕರ ಈ ಭಾಗದಲ್ಲಿ ಜಲಸ್ಫೋಟವಾಗಿಲ್ಲ ಎಂಬ ಪ್ರಚಾರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮದೆನಾಡುವಿನ ಹುಲುಕಜೆ ಬೆಟ್ಟದಲ್ಲಿ ಕಳೆದ ಒಂದು ವಾರದ ಹಿಂದೆ ಜಲಸ್ಫೋಟವಾಗಿ 4 ರಿಂದ 5 ಎಕರೆಗೂ ಹೆಚ್ಚಿನ ಭೂಮಿ ಕುಸಿದು ಹೋಗಿದೆ. 2018ರಲ್ಲಿ ಉಂಟಾದ ಗುಡ್ಡ ಕುಸಿತದ ರೀತಿಯಲ್ಲಿ ಈ ಬಾರಿಯೂ ಜಲ ಸ್ಫೋಟಗೊಂಡಿದೆ. ಇದರಿಂದ ಯಾರಿಗೂ ಅಪಾಯವೇನು ಆಗಿಲ್ಲ. ಆದರೆ, ಬೆಟ್ಟ ಕುಸಿದ ಕೆಳಭಾಗದಲ್ಲಿ ಸಾಕಷ್ಟು ಮನೆಗಳು ಕೂಡ ಇವೆ.
ಅಪಾಯದ ಅಂಚಿನಲ್ಲಿ ಇರುವವರನ್ನ ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ಕಳುಹಿಸಲಾಗಿದೆ. ಆದರೆ, ಇನ್ನಷ್ಟೂ ಬೆಟ್ಟ ಜರಿದಲ್ಲಿ ರಾಷ್ಟ್ರೀಯ ಹೆದ್ದಾರಿ 275ರ ಜೋಡ್ಪಾಲಕ್ಕೂ ಅಪಾಯ ಇದೆ. ಒಂದಷ್ಟು ಮಂದಿ ಅಪಾಯದ ಅಂಚಿನಲ್ಲಿದ್ದು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.