ಕೊಡಗು:ಕಳೆದ ಮೂರು ವರ್ಷಗಳಿಂದ ಅಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಪ್ರವಾಹ, ಗುಡ್ಡ ಕುಸಿತ ಸಂಭವಿಸಿ ಅಪಾರ ಆಸ್ತಿ-ಪಾಸ್ತಿ, ಪ್ರಾಣ ಹಾನಿ ಆಗಿರುವ ಘಟನೆಗಳು ಎಲ್ಲರಿಗೂ ಗೊತ್ತೇ ಇದೆ.
ಪ್ರತಿವರ್ಷ ಮಳೆಗಾಲ ಬಂತೆಂದರೆ ಸಾಕು, ಕೊಡಗಿನ ಜನ ಪ್ರಾಣ ಭಯದಲ್ಲಿಯೇ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಬಾರಿ ಮಳೆಯಿಂದ ಅಂತಹ ದೊಡ್ಡ ಅವಾಂತರಗಳೇನೂ ಆಗದಿದ್ದರೂ, ಅಲ್ಲಲ್ಲಿ ಭೂಮಿ ಬಾಯ್ತೆರೆದು ಚಿಂತೆಗೀಡು ಮಾಡಿದೆ.
ಕೊಡಗಿನ ಜನತೆಗೆ ಮತ್ತೆ ಭೂ ಕುಸಿತದ ಆತಂಕ ಕಳೆದ ಒಂದು ವಾರದಿಂದ ಸುರಿದ ಮಳೆಗೆ ಜಿಲ್ಲೆಯ ಮದೆನಾಡು ಗ್ರಾಮದ ಕರ್ತೋಜಿ ಬಳಿ ಭೂಮಿ ಬಾಯಿ ತೆರೆದಿದೆ. ಅಲ್ಲದೇ ಅದೇ ಗ್ರಾಮದ ನಿವಾಸಿ ಖಾದರ್ ಎಂಬವರ ಮನೆ ಕೂಡಾ ಸೀಳು ಬಿಟ್ಟಿದೆ. ಇತ್ತೀಚೆಗೆ ಮಡಿಕೇರಿ- ಮಂಗಳೂರು ರಾಜ್ಯ ಹೆದ್ದಾರಿಯ ಮದೆನಾಡು ಬಳಿ ಇದೇ ರೀತಿಯ ಘಟನೆ ಕಾಣಿಸಿಕೊಂಡಿತ್ತು. ಕೆಲ ತಿಂಗಳ ಹಿಂದೆ ಮದೆನಾಡು ಗ್ರಾಮದ ಒಂದು ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಬಿರುಕು ಬಿಟ್ಟಿತ್ತು.
ಇದನ್ನೂಓದಿ: ಮಡಿಕೇರಿ ಕೋಟೆ, ಅರಮನೆ ನವೀಕರಣ ಕಾಮಗಾರಿ ಸ್ಥಗಿತ: ಹೈಕೋರ್ಟ್ ಅತೃಪ್ತಿ
ಮದೆನಾಡು ಗ್ರಾಮ ಸೇರಿದಂತೆ ಎಲ್ಲಾ ಕಡೆಗಳಿಗೂ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ. ಕಳೆದ ವರ್ಷ ಜಿಲ್ಲೆಯ ವಿವಿದೆಡೆ ಭೂ ಕುಸಿತ ಸಂಭವಿಸಿ ದೊಡ್ಡ ಪ್ರಮಾಣ ಹಾನಿಯಾಗಿತ್ತು. ಈ ಬಾರಿ ಆ ರೀತಿ ಆಗದಂತೆ ತಡೆಯಲು ಜಿಲ್ಲಾಡಳಿತ ಮುಂಜಾಗೃತೆ ಕ್ರಮಗಳನ್ನು ಕೈಗೊಂಡಿದೆ. ಆದರೂ ಅಲ್ಲಲ್ಲಿ ಭೂಮಿ ಬಿರುಕು ಬಿಡುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.